Haryana Elections 2024: ಹರಿಯಾಣ ಚುನಾವಣಾ ಕಣದಲ್ಲಿ 538 ಶ್ರೀಮಂತ ಅಭ್ಯರ್ಥಿಗಳು
ನಾಳೆ ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ವಿವಿಧ ಪಕ್ಷಗಳಿಂದ ಈ ಬಾರಿ ಶ್ರೀಮಂತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಸದ್ಯ ಇದು ಹರಿಯಾಣದಲ್ಲಿ ಕುತೂಹಲ ಮೂಡಿಸಿದೆ. ಅತಿ ಹೆಚ್ಚು ಶ್ರೀಮಂತ ಅಭ್ಯರ್ಥಿಯ ಪಟ್ಟವನ್ನು ಬಿಜೆಪಿ ಅಲಂಕರಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಾರ ಹರಿಯಾಣದ ಹಿಸಾರ್ ಜಿಲ್ಲೆಯ ನಾರ್ನಾಂಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಅಭಿಮಾನ್ಯ ಅವರು 491 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಶ್ರೀಮಂತ ಅಭ್ಯರ್ಥಿ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಸೋಹ್ನಾ ರೋಹ್ತಾಸ್ ಸಿಂಗ್ ಅವರು 484 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಾವಿತ್ರಿ ಜಿಂದಾಲ್ ಅವರು 270 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಕಾಂಗ್ರೆಸ್‌ನ ಕೇಂದ್ರಬಿಂದು ಆಗಿರುವ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಅವರು ಮೂರು ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 1,031 ಅಭ್ಯರ್ಥಿಗಳ ಪೈಕಿ 1,028 ಅಭ್ಯರ್ಥಿಗಳ ಸ್ವಯಂ ಪ್ರಮಾಣ ಪತ್ರಗಳನ್ನು ಎಡಿಆರ್ ವಿಶ್ಲೇಷಣೆ ಮಾಡಿದೆ. ಕೆಲ ಅಭ್ಯರ್ಥಿಗಳ ಅಫಿಡವಿಟ್‌ಗಳ ಅಲಭ್ಯತೆಯಿಂದಾಗಿ ಮೂರು ಅಭ್ಯರ್ಥಿಗಳನ್ನು ಒಳಪಡಿಸಿಲ್ಲ ಎಂದು ಹೇಳಿದೆ.
ಹರಿಯಾಣ ಚುನಾವಣೆಯಲ್ಲಿ ಈ ಬಾರಿ ಶೂನ್ಯ ಆಸ್ತಿ ಘೋಷಿಸಿರುವ ಐದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಖರ್ಖೌಡಾ (ಎಸ್‌ಸಿ) ಕ್ಷೇತ್ರದಿಂದ ಯೋಗ ತುಳಸಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಪರ್ವೀನ್ ಖಾರ್ಖೋಡ ಅವರು ಕೇವಲ 8,000 ರೂಪಾಯಿಯ ಆಸ್ತಿ ಘೋಷಿಸಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿರುವಂತೆ 1,028 ಅಭ್ಯರ್ಥಿಗಳಲ್ಲಿ 538 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎನ್ನಲಾಗಿದೆ. ಕಳೆದ 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 481 ಕೋಟ್ಯಾಧಿಪತಿಗಳು ಕಣದಲ್ಲಿದ್ದರು ಎನ್ನಲಾಗಿದೆ.
ಈಗ ಒಟ್ಟು 277 ಅಭ್ಯರ್ಥಿಗಳು 5 ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. 136 ಅಭ್ಯರ್ಥಿಗಳು 2ರಿಂದ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಬಿಜೆಪಿಯ 85 ಅಭ್ಯರ್ಥಿಗಳು, ಕಾಂಗ್ರೆಸ್‌ನ 84 ಅಭ್ಯರ್ಥಿಗಳು, ಜನನಾಯಕ್ ಜನತಾ ಪಾರ್ಟಿಯ 46 ಮಂದಿ ಅಭ್ಯರ್ಥಿಗಳು, ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಗಳಲ್ಲಿ 52 ಮಂದಿ, ಬಿಎಸ್‌ಪಿ ಪಕ್ಷದ 18 ಮಂದಿ ಅಭ್ಯರ್ಥಿಗಳು 1 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಈ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 8.68 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಳೆದ 2019ರ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 4.31 ಕೋಟಿ ರೂಪಾಯಿ ಇತ್ತು. ಒಟ್ಟಾರೆ ಈ ಬಾರಿ ಬಹುತೇಕ ಅಭ್ಯರ್ಥಿಗಳು ಕೋಟ್ಯಧಿಪತಿಗಳು ಎನ್ನಲಾಗಿದೆ. ನಾಳೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೊಸ ಸರ್ಕಾರದ ರಚನೆಗೆ ದಿನಗಣನೆ ಶುರುವಾಗಿದೆ.












Click it and Unblock the Notifications