Viral: ₹37,000 ಸಂಬಳದಿಂದ 2.2 ಕೋಟಿ ರೂ. ಪ್ಯಾಕೇಜ್: ಕೆಲವೇ ವರ್ಷದಲ್ಲಿ ದೊಡ್ಡ ಜಂಪ್ ಪಡೆದ ಸಾಫ್ಟ್ವೇರ್ ಎಂಜಿನಿಯರ್
Viral: ಒಂದು ಕಾಲದಲ್ಲಿ ತಿಂಗಳಿಗೆ 37,000 ರೂ. ಗಳಿಸುತ್ತಿದ್ದ ಟೆಕ್ಕಿ ಇದೀಗ ವಾರ್ಷಿಕ 2.2 ಕೋಟಿಗಳ ಪ್ಯಾಕೇಜ್ ತಲುಪಿದ್ದಾರೆ. 11 ವರ್ಷಗಳ ವೃತ್ತಿಜೀವನದಲ್ಲಿ, ಅವರು ಕಂಪನಿಗಳನ್ನು ಬದಲಾಯಿಸಿದ್ದಾರೆ. FAANG ಮಟ್ಟದ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.ಸ್ಟಾರ್ಟ್ಅಪ್ಗೆ ಸೇರಿದ್ದಾರೆ, ಇಷ್ಟು ಮಾತ್ರವಲ್ಲದೆ ತಮ್ಮದೇ ಆದ ಫಿನ್ಟೆಕ್ ಕಂಪನಿಯನ್ನು ಕೂಡಾ ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿಯೇ ಅವರು ದೊಡ್ಡ ಮಟ್ಟದ ಬೆಳವಣಿಗೆಯನ್ನು ಅನುಭವಿಸಿದ್ದು. ಆದರೆ ಇವೆಲ್ಲದರ ಮಧ್ಯೆ, ಉದ್ಯೋಗ ನಷ್ಟದಿಂದ ಹಿಡಿದು ವ್ಯವಹಾರದ ತೊಂದರೆಗಳವರೆಗೆ ಒತ್ತಡದ ಬದುಕನ್ನು ಕೂಡಾ ನೋಡಿದ್ದಾರೆ. ಈ ವ್ಯಕ್ತಿ ತಮ್ಮ ಸಂಪೂರ್ಣ ಕಥೆಯನ್ನು ರೆಡ್ಡಿಟ್ನಲ್ಲಿ ಶೇರ್ ಮಾಡಿದ್ದಾರೆ.
2015 ರಲ್ಲಿ ಪ್ರಾರಂಭವಾದ ಕತೆ
ಈ ವ್ಯಕ್ತಿ 2015 ರಲ್ಲಿ ಸರ್ವಿಸ್ ಆಂಡ್ ಕನ್ಸಲ್ಟಿಂಗ್ ಕಂಪನಿಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ, ಅವರು ತಿಂಗಳಿಗೆ ಸುಮಾರು 37,000 ರೂ. ಸಂಬಳ ಪಡೀತಾ ಇದ್ರು. ಮೊದಲ ಕಂಪನಿಯಲ್ಲಿ ನಾಲ್ಕು ವರ್ಷಗಳವರೆಗೆ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ, ಅವರು ಅನುಭವ ಪಡೆದುಕೊಂಡರು. 2019 ರ ಹೊತ್ತಿಗೆ, ಅವರ ಸಂಬಳ ತಿಂಗಳಿಗೆ ಸುಮಾರು 1.1 ಲಕ್ಷ ಆಗಿತ್ತು.

2019 ರಲ್ಲಿ, ಅವರು ಉದ್ಯೋಗಗಳನ್ನು ಬದಲಾಯಿಸಲು ನಿರ್ಧರಿಸಿದರು. FAANG-ಮಟ್ಟದ ಕಂಪನಿಯನ್ನು ಸೇರಿದರು. ಇಲ್ಲಿ ಅವರ ಸಂಬಳ ಒಂದೇ ಬಾರಿಗೆ 4 ಲಕ್ಷಕ್ಕೆ ಏರಿತು. ಅಂದರೆ ಹಿಂದಿನ ಸಂಬಳಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿತ್ತು. ಇದು ಅವರ ಪಾಲಿಗೆ ಬಹು ದೊಡ್ಡ ಅವಕಾಶವಾಗಿತ್ತು. ನಂತರ, ಅವರ ವೃತ್ತಿಜೀವನದ ಬಗ್ಗೆ ಬೇರೆಯೇ ದೃಷ್ಟಿಕೋನ ಹೊರಬಂತು.
ಸಂಬಳ ಉತ್ತಮವಾಗಿದ್ದರೂ ಕೆಲಸದ ಒತ್ತಡವೂ ಅಷ್ಟೇ ಹೆಚ್ಚಾಗಿತ್ತು
COVID-19 ಸಾಂಕ್ರಾಮಿಕ ಸಮಯದಲ್ಲಿ, ಕೆಲಸದ ಒತ್ತಡವು ತುಂಬಾ ಹೆಚ್ಚಾಗಿತ್ತು. ಹಾಗಾಗಿ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. 2020ರ ಮಧ್ಯದಲ್ಲಿ ಆ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಆ ಸಮಯದಲ್ಲಿ ಅವರ ಕೈಯ್ಯಲ್ಲಿ ಬೇರೆ ಯಾವುದೇ ಆಫರ್ ಕೂಡಾ ಇರಲಿಲ್ಲ. ಇದರರ್ಥ ಅವರು ಒಂದು ಸಣ್ಣ ರಿಸ್ಕ್ ತೆಗೆದುಕೊಳ್ಳುವುದಕ್ಕೆ ರೆಡಿ ಇದ್ದರು.
50 ಲಕ್ಷದ ಉದ್ಯೋಗ ಪ್ಯಾಕೇಜ್₹70 ಲಕ್ಷಕ್ಕೆ ಏರಿತು: ನಂತರ ಅವರು ಅಮೆರಿಕದಲ್ಲಿ ರಿಯಲ್ ಎಸ್ಟೇಟ್ ಸ್ಟಾರ್ಟ್ಅಪ್ ಒಂದನ್ನು ಸೇರಿದರು. ಅಲ್ಲಿ ಅವರಿಗೆ ಸುಮಾರು 50 ಲಕ್ಷ ಪ್ಯಾಕೇಜ್ ಸಿಕ್ಕಿತು. ಕಾಲಾನಂತರದಲ್ಲಿ, ಬಡ್ತಿಯೊಂದಿಗೆ, ಈ ಮೊತ್ತ 65 ಲಕ್ಷಕ್ಕೆ ಏರಿತು.2021 ರ ಅಂತ್ಯದ ವೇಳೆಗೆ ಅವರ ಪ್ಯಾಕೇಜ್ ಸುಮಾರು 70 ಲಕ್ಷಕ್ಕೆ ತಲುಪಿತು.
ಕೆಲಸ ಬಿಟ್ಟು ಸ್ವಂತ ಫಿನ್ಟೆಕ್ ಕಂಪನಿ ಪ್ರಾರಂಭ: ಮೇ 2022 ರಲ್ಲಿ, ಅವರು ಮತ್ತೊಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು. ಈ ಬಾರಿ, ಉದ್ಯೋಗ ಬದಲಾಯಿಸುವ ಬದಲು, ಅವರು ತಮ್ಮದೇ ಆದ ಫಿನ್ಟೆಕ್ ಉದ್ಯಮವನ್ನು ಪ್ರಾರಂಭಿಸಿ CTO ಪಾತ್ರವನ್ನು ವಹಿಸಿಕೊಂಡರು. ಆರಂಭದಲ್ಲಿ, ಎಲ್ಲವೂ ಚೆನ್ನಾಗಿಯೇ ನಡೆಯಿತು, ನಂತರ ಲೈಸನ್ಸ್ ಸಮಸ್ಯೆಗಳು ಉದ್ಭವಿಸಿದವು, ತೊಂದರೆಗಳು ಹೆಚ್ಚಾದವು. ಸಹ-ಸಂಸ್ಥಾಪಕರೊಬ್ಬರು ಕಂಪನಿಯನ್ನು ಬಿಟ್ಟು ಹೊರ ನಡೆದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಅಂತಿಮವಾಗಿ, ಆಗಸ್ಟ್ 2024 ರಲ್ಲಿ, ಮತ್ತೆ ಹೊಸ ಕೆಲಸದ ಹುಡುಕಾಟಕ್ಕೆ ಕೈ ಹಾಕುತ್ತಾರೆ.
2024 ರಲ್ಲಿ, ಅವರು ಭಾರತೀಯ ಸ್ಟಾರ್ಟ್ಅಪ್ನಲ್ಲಿ ಸುಮಾರು 1.2 ಕೋಟಿ ಸಂಬಳಕ್ಕೆ ಕೆಲಸಕ್ಕೆ ಸೇರುತ್ತಾರೆ. ಆದರೆ, ಈ ಪ್ರಯಾಣ ಹೆಚ್ಚು ಕಾಲ ಉಳಿಯಲಿಲ್ಲ. ಫೆಬ್ರವರಿ 2025 ರಲ್ಲಿ, ಅವರು ಮತ್ತೊಂದು FAANG ಕಂಪನಿಯನ್ನು ಸೇರಿದರು. ಅಲ್ಲಿ ಅವರ ಸಂಬಳ ಸುಮಾರು 1.5 ಕೋಟಿ ಆಗಿತ್ತು. ಇದರ ನಂತರ, ಅವರ ವೃತ್ತಿಜೀವನದ ಪಥವು ಮತ್ತೊಮ್ಮೆ ಉತ್ತುಂಗಕ್ಕೆ ಏರುತ್ತದೆ. ಮಾರ್ಚ್ 2026 ರಲ್ಲಿ, ಅವರಿಗೆ ಪ್ರಮೋಷನ್ ಸಿಗುತ್ತದೆ. ಕಂಪನಿಯ ಷೇರು ಮೌಲ್ಯ ಕೂಡಾ ಹೆಚ್ಚಾಗುತ್ತದೆ. ಅಲ್ಲಿಗೆ ಅವರ ಒಟ್ಟು ವೇತನವು ಸುಮಾರು 2.2 ಕೋಟಿಗೆ ತಲುಪುತ್ತದೆ.
37,000 ದಿಂದ 2.2 ಕೋಟಿಯವರೆಗೆ
ಈ 11 ವರ್ಷಗಳ ಕಥೆಯನ್ನು ಕೇವಲ ಸಂಬಳ ಹೆಚ್ಚಳದ ದೃಷ್ಟಿಯಿಂದ ನೋಡುವುದು ಸುಲಭ. ಆದರೆ ಅದರ ಹಿಂದೆ ನಿರಂತರ ಬದಲಾವಣೆ ಮತ್ತು ರಿಸ್ಕ್ ತೆಗೆದುಕೊಳ್ಳುವ ಕಥೆಯೂ ಇದೆ. ಒಂದೆಡೆ, ಉದ್ಯೋಗ ಬದಲಾವಣೆಗಳು ಗಣನೀಯ ಸಂಬಳ ಏರಿಕೆಗೆ ಕಾರಣವಾದರೆ, ಮತ್ತೊಂದೆಡೆ, ಮಾನಸಿಕ ಒತ್ತಡ ಕೂಡಾ ಹೆಚ್ಚು ಮಾಡಿತ್ತು. ಕೆಲಸ ಬಿಡುವಂತೆಯೂ ಮಾಡಿತ್ತು. ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸುವ ರಿಸ್ಕ್ ಕೂಡಾ ತೆಗೆದುಕೊಳ್ಳುವ ಹಾಗೆ ಆಯಿತು. ಲೈಸನ್ಸ್ ಮತ್ತು ಸಹ-ಸಂಸ್ಥಾಪಕರನ್ನು ಹುಡುಕುವಲ್ಲಿನ ಸಮಸ್ಯೆಗಳು ಅವರನ್ನು ಮತ್ತೆ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರುವಂತೆ ಮಾಡಿತು.
ಈ ವೃತ್ತಿಜೀವನದ ಕಥೆ ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ ನಂತರ ಇದು ಜನರ ಗಮನ ಸೆಳೆಯಿತು. ಕೆಲವು ಬಳಕೆದಾರರು ತಮ್ಮ ಸುತ್ತ ಮುತ್ತ ಇರುವವರು ಕೂಡಾ 1.5-2 ಕೋಟಿ ಗಳಿಸುತ್ತಾರೆ ಎಂದು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಒಬ್ಬ ಬಳಕೆದಾರರು ತಮ್ಮ ಕಂಪನಿಯಲ್ಲಿರುವ ಹಲವಾರು ಸೀನಿಯರ್ಗಳು 1.5 ರಿಂದ 2 ಕೋಟಿ ವರೆಗೆ ಆದಾಯ ಗಳಿಸುತ್ತಾರೆ. ಅವರ್ಯಾರೂ ಪ್ರತಿಷ್ಠಿತ ಕಾಲೇಜುಗಳಿಗೆ ಹೋಗಿಲ್ಲ ಎಂದು ಗಮನ ಸೆಳೆದರು. ಕೆಲವರು ಈ ಜರ್ನಿಯನ್ನು ಸ್ಪೂರ್ತಿದಾಯಕ ಎಂದು ಕರೆದಿದ್ದಾರೆ.


Click it and Unblock the Notifications
