ಭಾರತದಲ್ಲಿ ಒಂದೇ ದಿನ 4120 ಜನರ ಉಸಿರು ಕಸಿದ ಕೊರೊನಾವೈರಸ್!
ನವದೆಹಲಿ, ಮೇ 13: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸಾವಿರ ಸಾವಿರ ಸೋಂಕಿತರ ಉಸಿರು ಕಸಿಯುತ್ತಿದೆ. ದಿನದಿಂದ ದಿನಕ್ಕೆ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಡುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲೇ 4120 ಮಂದಿ ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಚಿದ್ದು, ದೇಶದಲ್ಲಿ ಈವರೆಗೂ ಮಹಾಮಾರಿಯಿಂದ 2,58,317 ಜನರು ಉಸಿರು ನಿಲ್ಲಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಒಂದೇ ದಿನ 3,62,727 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,52,181 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 2,37,03,665 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 1,97,34,823 ಸೋಂಕಿತರು ಗುಣಮುಖರಾಗಿದ್ದು, 37,10,525 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಒಂದೇ ದಿನ ಎಷ್ಟು ಜನರಿಗೆ ಕೊವಿಡ್-19 ತಪಾಸಣೆ?
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 18,64,594 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 30,94,48,585 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.












Click it and Unblock the Notifications