ಇನ್ನೂ 30 ಜಿಲ್ಲೆಗಳಲ್ಲಿ ತಗ್ಗಿಲ್ಲ ಕೋವಿಡ್ ಪಾಸಿಟಿವಿಟಿ ದರ; ವರದಿ
ನವದೆಹಲಿ, ಅಕ್ಟೋಬರ್ 04; ಕೊರೊನಾ ಸೋಂಕಿನ ರಾಷ್ಟ್ರೀಯ ಪಾಸಿಟಿವಿಟಿ ದರವು ಐದು ತಿಂಗಳಿನಿಂದ ಕುಸಿತ ಕಂಡಿದ್ದರು ಇನ್ನೂ ಆರು ರಾಜ್ಯಗಳ ಕನಿಷ್ಠ 30 ಜಿಲ್ಲೆಗಳು ಶೇ 10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ದಾಖಲಿಸುತ್ತಿವೆ. ಕೇರಳ ರಾಜ್ಯವೊಂದರಲ್ಲಿಯೇ ಹೆಚ್ಚು ಪಾಸಿಟಿವಿಟಿ ದರ ಹೊಂದಿರುವ 13 ಜಿಲ್ಲೆಗಳಿವೆ.
ರಾಷ್ಟ್ರೀಯವಾಗಿ ಸೋಂಕಿನ ವಾರದ ಪಾಸಿಟಿವಿಟಿ ದರವು 13 ದಿನಗಳಿಂದ 3%ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸುತ್ತಿವೆ. ಪಾಸಿಟಿವಿಟಿ ದರವು ರೋಗದ ಹರಡುವಿಕೆ ಪ್ರಮಾಣವನ್ನು ಪ್ರತಿನಿಧಿಸುತ್ತವೆ.
ಇನ್ನೂ 30 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣ ತಜ್ಞರು ಹೆಚ್ಚು ಪಾಸಿಟಿವಿಟಿ ದರವಿರುವ ಪ್ರದೇಶಗಳಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಕೇರಳದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದೆ. ಆದರೆ ಸೋಂಕಿನ ಅಪಾಯ ಹೆಚ್ಚಿರುವ ಕಡೆಗಳನ್ನು ಗುರಿಯಾಗಿಸಿ ಪರೀಕ್ಷೆ ನಡೆಸುತ್ತಿದ್ದು, ಬೇರೆಡೆ ಪರೀಕ್ಷೆ ನಡೆಸದೇ ಇದ್ದರೆ, ಲಕ್ಷಣರಹಿತ ಸೋಂಕಿನ ಪತ್ತೆಯನ್ನು ತಪ್ಪಿಸಿರುವ ಸಾಧ್ಯತೆಗಳು ಅಧಿಕವಿರುತ್ತವೆ. ಹೀಗಾಗಿ ಸೋಂಕು ಕೆಲವೇ ದಿನಗಳಲ್ಲಿ ಉಲ್ಬಣವಾಗಿ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತವೆ.
11 ರಾಜ್ಯಗಳ 18 ಜಿಲ್ಲೆಗಳು ಇನ್ನೂ 5 ರಿಂದ 10%ವರೆಗೆ ಪಾಸಿಟಿವಿಟಿ ದರವನ್ನು ವರದಿ ಮಾಡುತ್ತಿವೆ. ಇದು ಕೊರೊನಾ ಸೋಂಕಿನ ಹರಡುವಿಕೆ ಪ್ರಮಾಣ ಸದ್ದಿಲ್ಲದೇ ಹೆಚ್ಚಾಗುತ್ತಿರುವ ಸೂಚನೆಯನ್ನು ನೀಡುತ್ತಿದೆ.
ನಿರ್ದಿಷ್ಟ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆಯೇ ಎಂದು ನಿರ್ಧರಿಸಲು ಸುಮಾರು ಎರಡು ವಾರಗಳವರೆಗೆ ಅಲ್ಲಿ 5%ಗಿಂತ ಕಡಿಮೆ ಪಾಸಿಟಿವಿಟಿ ದರ ಹೊಂದಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.

ಕೇರಳದ ಹೊರತಾಗಿ ಮಿಜೋರಾಂನ ಎಂಟು ಜಿಲ್ಲೆಗಳಲ್ಲಿ, ಮಣಿಪುರ, ಅರುಣಾಚಲ ಪ್ರದೇಶದ ತಲಾ ಮೂರು, ಸಿಕ್ಕಿಂ ಎರಡು ಹಾಗೂ ಮೇಘಾಲಯದ ಒಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಿರುವುದು ದಾಖಲಾಗಿದೆ.
ಕೇರಳದಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಟ್ಟು 144075 ಸಕ್ರಿಯ ಪ್ರಕರಣಗಳಿದ್ದು, ಇಡೀ ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಇದರ ಪಾಲು 52.01%ರಷ್ಟಿದೆ.
ಐದು ರಾಜ್ಯಗಳಲ್ಲಿ 50 ಸಾವಿರದಿಂದ ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ 40,252, ತಮಿಳುನಾಡು 17,192, ಮಿಜೋರಾಂ 16,841, ಕರ್ನಾಟಕ 12,594 ಹಾಗೂ ಆಂಧ್ರ 11,655 ಸಕ್ರಿಯ ಪ್ರಕರಣಗಳಿವೆ.
ಈ ಕಡೆಗಳಲ್ಲಿ ಹಬ್ಬದ ಸಮಯಕ್ಕೆ ಮುಂಚಿತವಾಗಿ ರೋಗ ನಿಯಂತ್ರಣಕ್ಕೆ ಸರ್ಕಾರ ನಿಯಮಿತ ಸಲಹೆಗಳನ್ನು ನೀಡುತ್ತಲೇ ಬಂದಿದೆ.
ಮಿಜೋರಾಂನಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ:
ಕೇರಳದ ಬಳಿಕ ಇದೀಗ ಮಿಜೋರಾಂನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಮಿಜೋರಾಂನಲ್ಲಿ ಪಾಸಿಟಿವಿಟಿ ದರವು ದೇಶದಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರವು ತನ್ನ ತಂಡವನ್ನು ಮಿಜೋರಾಂ ರಾಜ್ಯಕ್ಕೆ ಕಳುಹಿಸಿ ನೆರವು ನೀಡುತ್ತಿದೆ.
ಮಿಜೋರಾಂನಲ್ಲಿ ಸದ್ಯ ಪಾಸಿಟಿವಿಟಿ ದರ 18.44% ಇದೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ.
5% ಪಾಸಿಟಿವಿಟಿ ದರ ವರದಿಯಾಗುವ ಕಂಟೇನ್ಮೆಂಟ್ ವಲಯಗಳಲ್ಲಿ ಸಾಮೂಹಿಕ ಕೂಟಗಳಿಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರರಣಗಳು ವರದಿ ಮಾಡುತ್ತಿರುವ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕವಾಗಿರುವಂತೆ ತಿಳಿಸಿದೆ.
ಭಾರತದಲ್ಲಿ ಕೊರೊನಾ ಪ್ರಕರಣ:
ಭಾರತದಲ್ಲಿ ಭಾನುವಾರ 22,842 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 244 ಜನರು ಸಾವನ್ನಪ್ಪಿದ್ದಾರೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 2,70,557 ಆಗಿದ್ದು, ಒಟ್ಟು 3,30,94,529 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೂ ಒಟ್ಟು 4,48,817 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಜ್ಞರ ಎಚ್ಚರಿಕೆ:
ಕೊರೊನಾ ಸೋಂಕಿನ ವಿರುದ್ಧ ಹಲವು ದೇಶಗಳಲ್ಲಿ ಹೋರಾಟ ಇನ್ನೂ ಮುಂದುವರೆದಿದೆ. ಭಾರತದಲ್ಲಿಯೂ ಸೋಂಕು ಪ್ರತೀಕಾರದೊಂದಿಗೆ ಮರಳಬಹುದು ಎಂದು ಉನ್ನತ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿದೆ. ಆದರೆ ಪ್ರತೀಕಾರದೊಂದಿಗೆ ಸೋಂಕು ಮರಳಬಹುದು. ಹೀಗಾಗಿ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ ಎಂದು ದೆಹಲಿಯ ಏಮ್ಸ್ ಕೊರೊನಾ ಟಾಸ್ಕ್ ಪೋರ್ಸ್ ಅಧ್ಯಕ್ಷ ಡಾ. ನವೀತ್ ವಿಗ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ದರ 10% ಇದೆ. ಹಲವು ದೇಶಗಳಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಆದ್ದರಿಂದ ನಾವು ಬಹಳ ಜಾಗರೂಕವಾಗಿರಬೇಕು ಸೋಂಕು ರುದ್ರ ರೂಪ ತಾಳಬಹುದು ಎಂದು ಎಚ್ಚರಿಸಿದ್ದಾರೆ.












Click it and Unblock the Notifications