ಗುಂಡಿನ ಚಕಮಕಿ: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೈನಿಕರು
ಶ್ರೀನಗರ್, ಅಕ್ಟೋಬರ್ 21: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೈನಿಕರು ಹಾಗೂ ಉಗ್ರಗಾಮಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ವೇಳೆ ಇಬ್ಬರು ಸೈನಿಕರಿಗೆ ಗಾಯಗಳಾಗಿವೆ. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಶೆಲ್ ಸಿಡಿದು, ಐವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಚಕಮಕಿ ಮುಗಿದ ಬಳಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಚಕಮಕಿ ಶುರುವಾದಾಗ ಗಾಬರಿ ಆದ ಕೆಲವರು ಆ ಸ್ಥಳದಲ್ಲಿ ಒಂದು ಮನೆಯೊಳಗೆ ಹೋಗಿದ್ದಾರೆ. ಆಗ ಶೆಲ್ ವೊಂದು ಸಿಡಿದಿದೆ. ಮನೆಯೊಂದರಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂದು ಗುಪ್ತಚರ ವಿಭಾಗದಿಂದ ಮಾಹಿತಿ ದೊರೆತ ಮೇಲೆ ಲಾರೋ ಪ್ರದೇಶದಲ್ಲಿ ಭದ್ರತಾ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಿದವು.
ಆಗ ಭಯೋತ್ಪಾದಕರು ಸೈನಿಕರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸೈನಿಕರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಕರ್ಲ್ ಹಾರ್ ಪ್ರದೇಶದಲ್ಲಿ ಪೊಲೀಸರ ಮೇಲೆ ದಾಳಿಗೆ ಪ್ರಯತ್ನಿಸಿದ್ದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು.

ಪೊಲೀಸರು ಎರಡು ಎಕೆ- 47 ರೈಫಲ್ ವಶಪಡಿಸಿಕೊಂಡಿದ್ದಾರೆ. ಜತೆಗೆ ಮೂರು ಗ್ರೆನೇಡ್, ಚೀನಾ ನಿರ್ಮಿತ ಎರಡು ಪಿಸ್ತೂಲು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications