ಸಿಬಿಐ ನಿರ್ದೇಶಕರ ಆಯ್ಕೆ: ಪಟ್ಟಿಯಲ್ಲಿ ಕರ್ನಾಟಕದ ಪ್ರವೀಣ್ ಸೂದ್ ಹೆಸರು
ಕೇಂದ್ರೀಯ ತನಿಖಾ ದಳ (ಸಿಬಿಐ) ಉನ್ನತ ಹುದ್ದೆಗೆ ಮೂವರು ಉನ್ನತ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಸಿಬಿಐನ ಉನ್ನತ ಹುದ್ದೆಗೆ ಒಟ್ಟಾಗಿ 3 ಅಧಿಕಾರಿಗಳನ್ನು ಆಯ್ಕೆ ಮಾಡಿದೆ.
ಶನಿವಾರ ಸಂಜೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಮೂರು ಅಧಿಕಾರಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಲಿದೆ ಎಂದು ವರದಿ ಉಲ್ಲೇಖಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕರ ಪೊಲೀಸ್ ಅಧಿಕಾರಿಯ ಹೆಸರು ಕೂಡಾ ಕಾಣಿಸಿಕೊಂಡಿದೆ. ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್, ಮಧ್ಯಪ್ರದೇಶ ಡಿಜಿಪಿ ಸುಧೀರ್ ಸಕ್ಸೆನಾ, ತಾಜ್ ಹಾಸನ್ ಹೆಸರು ಸಿಬಿಐ ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಪ್ರಸ್ತುತ ಸಿಬಿಐನ ನಿರ್ದೇಶಕರಾಗಿರುವ ಸುಬೋದ್ ಕುಮಾರ್ ಜಸ್ವಾಲ್‌ರ 2 ವರ್ಷದ ಅವಧಿಯು ಮೇ 25ರಂದು ಕೊನೆಯಾಗುತ್ತದೆ. ಈ ಅವಧಿ ಮುಕ್ತಾಯುಕ್ಕೂ ಮುನ್ನ ನೂತನ ನಿರ್ದೇಶಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಪಟ್ಟಿಯಲ್ಲಿ ಕಂಡು ಬಂದಿರುವ ಕರ್ನಾಟಕದ ಪ್ರವೀಣ್ ಸೂದ್ ಬಗ್ಗೆ ಇಲ್ಲಿದೆ ವಿವರ...
ಪ್ರವೀಣ್ ಸೂದ್ ಬಗ್ಗೆ ತಿಳಿಯಿರಿ
ಪ್ರವೀಣ್ ಸೂದ್ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು ಸಿಬಿಐ ನಿರ್ದೇಶಕರ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ ಇವರ ಹೆಸರು ಕೂಡಾ ಕಾಣಿಸಿಕೊಂಡಿದೆ. ಮಾರ್ಚ್ ತಿಂಗಳಿನಲ್ಲಿ ಪ್ರವೀಣ್ ಸೂದ್ ಭಾರೀ ಚರ್ಚೆಗೆ ಒಳಗಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೂದ್ ಕಾಪಾಡುತ್ತಾರೆ ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು.
ಬಿಜೆಪಿ ಸರ್ಕಾರವನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವ ಪ್ರವೀಣ್ ಸೂದ್‌ರನ್ನು ಬಂಧನ ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇನ್ನು ಪ್ರವೀಣ್ ಸೂದ್ ಕಾಂಗ್ರೆಸ್ ನಾಯಕರುಗಳ ವಿರುದ್ಧ ಕೇಸ್ ದಾಖಲು ಮಾಡುತ್ತಿದ್ದಾರೆ ಎಂದು ಕೂಡಾ ಡಿಕೆ ಶಿವಕುಮಾರ್ ಆರೋಪಿಸಿದ್ದರು.
ಪ್ರಧಾನ ಮಂತ್ರಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಬಹುದಾಗಿದೆ. ಸಭೆಯಲ್ಲಿ, ಹೊಸ ಕೇಂದ್ರ ವಿಜಿಲೆನ್ಸ್ ಕಮಿಷನರ್ ಮತ್ತು ಸದಸ್ಯ ಲೋಕಪಾಲ ಆಗಿ ನೇಮಕಗೊಳ್ಳುವ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.












Click it and Unblock the Notifications