22,500 ಕೋಟಿ ವ್ಯಯಿಸಿ 278 ವಿವಿ ಕಟ್ಟಲಿದೆ ಸರ್ಕಾರ
ನವದೆಹಲಿ, ನ.26: ದೇಶದಲ್ಲಿ ಹೊಸದಾಗಿ 278 ಹೊಸ ವಿಶ್ವವಿದ್ಯಾಲಯಗಳು ಹಾಗೂ 388 ಕಾಲೇಜುಗಳನ್ನು ಪ್ರಾರಂಭಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಚಿಂತನೆ ನಡೆಸಿದೆ. ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ(RUSA) ಕಾರ್ಯಕ್ರಮ ಅನುಷ್ಠಾನ ಕುರಿತಂತೆ ನಡೆದ ಅಖಿಲ ಭಾರತ ಉನ್ನತ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಠಾಕೂರ್ ಈ ವಿಷಯ ತಿಳಿಸಿದ್ದಾರೆ.
ಹೊಸದಾಗಿ ಆರಂಭವಾಗಲಿರುವ 388 ಕಾಲೇಜುಗಳು ಕೂಡಾ ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯವಾಗಿ ಮಾರ್ಪಡಲಿದೆ ಎಂದರು. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಕಾಲೇಜುಗಳ ಸಂಖ್ಯೆಯನ್ನು ಕನಿಷ್ಠ 100ಕ್ಕೆ ಇಳಿಸಬೇಕಾಗಿದೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಎಂ.ಎಂ.ಪಲ್ಲಂ ರಾಜು, ಉನ್ನತ ಶಿಕ್ಷಣದ ಅಭ್ಯುದಯಕ್ಕಾಗಿ ಕೇಂದ್ರ ಸರಕಾರ 12ನೆ ಪಂಚವಾರ್ಷಿಕ ಯೋಜನಾವಧಿಯಲ್ಲಿ 22,500 ಕೋಟಿ ರೂ. ವೆಚ್ಚಮಾಡಲಿದೆ ಎಂದರು.

ಆದರೆ, ಕೆಲ ರಾಜ್ಯ ಸರಕಾರಗಳು ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಿರುವ ಬೆಳವಣಿಗೆ ಸರಿಯಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಇತಿಹಾಸ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ ಹಿನ್ನೆಲೆ ಇರುವುದಿಲ್ಲ. ಇಂತಹ ಸಂಸ್ಥೆಗಳಿಗೆ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ನೀಡುವುದು ಸರಿಯಲ್ಲ ಎಂದು ಹೇಳಿದರು.
ಇದರ ಬದಲು ಸ್ವಾಯತ್ತತೆ ಸ್ಥಾನಮಾನ ಹೊಂದಿರುವ ಉನ್ನತ ಹಿನ್ನೆಲೆ ಹೊಂದಿರುವ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರೇರೇಪಿಸಿದರೆ ಒಳ್ಳೆಯದು. ಇದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಉಚ್ಚತರ ಶಿಕ್ಷಣ ಯೋಜನೆಯಡಿ ಯಲ್ಲಿ ದೇಶದ 306 ವಿಶ್ವವಿದ್ಯಾಲಯಗಳು ಮತ್ತು 8,500 ಕಾಲೇಜುಗಳು ಬರುತ್ತವೆ. ಇನ್ನು ಮುಂದೆ ಉನ್ನತ ಶಿಕ್ಷಣಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದರು.
ಬೆಳಗಾವಿ: ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜ್ ನ್ನು ಆರಂಭಿಸಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದ್ದು, ಪರಿಷ್ಕೃತ ಬಜೆಟ್ ನಡಿ ಚಾಮರಾಜನಗರ, ಕೊಡಗು, ಕೊಪ್ಪಳ, ಕಾರವಾರ, ಗುಲ್ಬರ್ಗಾ ಮತ್ತು ಗದಗ ಜಿಲ್ಲೆಗಳಲ್ಲಿ ಆರು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. 173 ಕೋಟಿ ರೂ.ಗಳನ್ನು ಈಗಾಗಲೇ ಈ ಸಂಬಂಧವಾಗಿ ನೀಡಲಾಗಿದೆ.
ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಹಣಕಾಸು ಲಭ್ಯತೆಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಯೊಂದು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕನಿಷ್ಠ 360 ಕೋಟಿ ರೂ. ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದ್ದಾರೆ.












Click it and Unblock the Notifications