ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
ನವದೆಹಲಿ, ಜನವರಿ.26: ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ವಿಶ್ವದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, 20,29,424 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಕಳೆದ ಜನವರಿ.16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಲಸಿಕೆ ವಿತರಣೆ ಅಭಿಯಾನಕ್ಕೆ ಮೊದಲು ಚಾಲನೆ ನೀಡಿದ್ದರು. ರಾಷ್ಟ್ರವ್ಯಾಪಿ ಕೊವಿಡ್-19 ಲಸಿಕೆ ವಿತರಣೆಯ 11ನೇ ದಿನ ವೈದ್ಯಕೀಯ ಸಿಬ್ಬಂದಿ ಹೊರತಾಗಿ 5615 ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ವೈದ್ಯಕೀಯ ಸಿಬ್ಬಂದಿ ಹೊರತಾಗಿ ಫಲಾನುಭವಿಗಳಿಗೆ ಲಸಿಕೆ:
ದೇಶದ ಐದು ರಾಜ್ಯಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹೊರತಾಗಿ 2ನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವರ್ಷದೊಳಗಿನ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಯಿತು. ಈ ವರೆಗೂ ಆಂಧ್ರ ಪ್ರದೇಶದ 5, ಕರ್ನಾಟಕದ 429, ರಾಜಸ್ಥಾನದ 216, ತಮಿಳುನಾಡಿನ 4926, ತೆಲಂಗಾಣದ 35 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.












Click it and Unblock the Notifications