ಸತತ ಎರಡನೆಯ ದಿನವೂ ಏರಿಕೆಯಾದ ಕೋವಿಡ್ ಪ್ರಕರಣ
ನವದೆಹಲಿ, ಫೆಬ್ರವರಿ 19: ದೇಶದಲ್ಲಿ ಕಡಿಮೆಯಾಗುತ್ತಿದ್ದ ಕೊರೊನಾ ವೈರಸ್ ಪ್ರಕರಣಗಳಲ್ಲಿ ಮತ್ತೆ ಆಘಾತಕಾರಿ ಹೆಚ್ಚಳವಾಗುತ್ತಿದೆ. ಪ್ರಕರಣಗಳ ಸಂಖ್ಯೆ ತಗ್ಗಿದಂತೆ ಜನರು ಮೈಮರೆಯತೊಡಗಿದ್ದರು. ಈಗ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಎಚ್ಚರಿಕೆಯ ಗಂಟೆ ಮೊಳಗಿಸಿದೆ.
ದೇಶದಲ್ಲಿ 24 ಗಂಟೆಗಳಲ್ಲಿ 13,193 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಸತತ ಎರಡನೆಯ ದಿನ 12 ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಗುರುವಾರ ಸಹ ಬಿಡುಗಡೆಯಾದವರ ಸಂಖ್ಯೆಗಿಂತ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು.
ಎರಡು ದಿನ 100 ಗಡಿ ಮುಟ್ಟಿದ್ದ ಸಾವಿನ ಸಂಖ್ಯೆ 97ಕ್ಕೆ ಇಳಿದಿರುವುದು ಸಮಾಧಾನಕರ ಸಂಗತಿ. ಗುರುವಾರ ಸಂಜೆಯವರೆಗೆ ಆಸ್ಪತ್ರೆಗಳಿಂದ 10,896 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,09,63,394ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟು 1,06,67,741 ಮಂದಿ ಬಿಡುಗಡೆಯಾಗಿದ್ದಾರೆ. 1,56,111 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ನಡುವೆ ಸಕ್ರಿಯ ಪ್ರಕರಣಗಳು 1,39,542ಕ್ಕೆ ಏರಿಕೆಯಾಗಿದೆ.
ಕೋವಿಡ್ ರಕ್ಷಣೆ ವಿರುದ್ಧ ನೀಡಲಾಗುತ್ತಿರುವ ಲಸಿಕೆ ಕಾರ್ಯಕ್ರಮದಲ್ಲಿ ಸಹ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಇದುವರೆಗೂ ಒಂದು ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಒಟ್ಟು 1,01,88,007 ಮಂದಿಗೆ ಲಸಿಕೆ ಕೊಡಲಾಗಿದೆ ಎಂದು ವರದಿ ಹೇಳಿದೆ.












Click it and Unblock the Notifications