Lok Sabha Election: ₹7,00,00,00,000 ಬೆಲೆಯ 14,25,000 ಗ್ರಾಂ ಚಿನ್ನ ಜಪ್ತಿ ಮಾಡಿದ ಪೊಲೀಸರು- ಎಲ್ಲಿ? ಮಾಹಿತಿ, ವಿವರ
ಚೆನ್ನೈ, ಏಪ್ರಿಲ್, 14: ಲೋಕಸಭಾ ಚುನಾವಣೆ ಹಿನ್ನೆಲೆ ಇದೀಗ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಹೈ ಅಲರ್ಟ್ ಆಗಿದ್ದಾರೆ. ಅಲ್ಲದೇ ಈಗಾಗಲೇ ಸುಮಾರು ಕಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಆಭರಗಳನ್ನು ಕೂಡ ವಶಕ್ಕೆ ಪಡೆದಿರುವ ಘಟನೆಗಳು ಕೂಡ ನಡೆದಿವೆ. ಇದೀಗ ಶ್ರೀಪೆರಂಬದೂರು ಕ್ಷೇತ್ರದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮಿಂಜೂರು-ವಂಡಲೂರು ಹೊರ ವರ್ತುಲ ರಸ್ತೆಯಲ್ಲಿ ಮಿನಿ ಟ್ರಕ್‌ವೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಸ್ಕ್ವಾಡ್ ಅಧಿಕಾರಿಗಳು ಮಿಂಜೂರು-ವಂಡಲೂರು ಹೊರ ವರ್ತುಲ ರಸ್ತೆಯಲ್ಲಿ ಮಿನಿ ಟ್ರಕ್‌ವೊಂದರ ಮೇಲೆ ದಾಳಿ ನಡೆಸಿದ್ದು, ಈ ವೇಳೆ 700 ಕೋಟಿ ರೂಪಾಯಿ ಮೌಲ್ಯದ 1,425 ಕೆ.ಜಿ. ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಇವುಗಳನ್ನು ಸೂಕ್ತ ದಾಖಲೆ ಇಲ್ಲದೆ ಮಿನಿ ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಅಧಿಕಾರಿಗಳು ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚುನಾವಣೆಗೂ ಮುನ್ನ ಮಾದರಿ ನೀತಿ ಸಂಹಿತೆ ದೇಶಾದ್ಯಂತ ಜಾರಿಯಲ್ಲಿದ್ದು, ಚುನಾವಣಾ ಆಯೋಗವು ತೀವ್ರ ತಪಾಸಣೆ ನಡೆಸಲು ಎಲ್ಲಾ ಕ್ಷೇತ್ರಗಳಲ್ಲಿ ಹಲವಾರು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜನೆ ಮಾಡಿದೆ.
ಶ್ರೀಪೆರಂಬದೂರು ಕ್ಷೇತ್ರದ ಭಾಗವಾಗಿರುವ ಶ್ರೀಪೆರಂಬದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಚೀಪುರಂ ಜಿಲ್ಲಾಡಳಿತದ ಸೂಚನೆಯಂತೆ 7 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಿದೆ. ಈ ಅಧಿಕಾರಿಗಳು ದಿನದ 24 ಗಂಟೆಗಳ ಕಾಳ ಗಸ್ತು ತಿರುಗುತ್ತಾರೆ. ಅಲ್ಲದೆ ವಾಹನ ತಪಾಸಣೆ ಸೇರಿದಂತೆ ವಿವಿಧ ತಪಾಸಣೆಯನ್ನು ಕೂಡ ನಡೆಸುತ್ತಾರೆ.
ಇದೀಗ ಕುಂದ್ರತ್ತೂರು ಪ್ರದೇಶದ ವಂಡಲೂರು-ಮಿಂಜೂರು ಹೊರವರ್ತುಲ ರಸ್ತೆಯ ಮೇಲ್ಸೇತುವೆ ಬಳಿ ಇಂತಹ ಒಂದು ತಪಾಸಣೆಯ ವೇಳೆ ಮಿಂಜೂರಿನಿಂದ ಶ್ರೀಪೆರಂಬದೂರು ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಮತ್ತು ಮಿನಿ ಲಾರಿಯೊಂದನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಡೆದಿದ್ದಾರೆ.
ಮಿನಿ ಲಾರಿಯಲ್ಲಿ ತಪಾಸಣೆ ನಡೆಸಿದಾಗ 1,425 ಕೆಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಶ್ರೀಪೆರಂಬದೂರು ಬಳಿಯ ಕಾರ್ಖಾನೆಯ ಗೋ-ಡೌನ್‌ಗೆ ಚಿನ್ನದ ಗಡ್ಡಿಗಳನ್ನು ಸಾಗಿಸಲಾಗುತ್ತಿತ್ತು. ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಪತ್ರಗಳು ನೀಡಿದ ರಸೀದಿಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿದ್ದೇವೆ ಎಂದು ಜೊತೆಯಲ್ಲಿದ್ದ ಕಾರಿನಲ್ಲಿದ್ದವರು ಹೇಳಿದ್ದಾರೆ. ಆದರೆ, ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ದಾಖಲೆಗಳಲ್ಲಿ ಸಂಪೂರ್ಣ ವಿವರ ಇಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.
ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮಿನಿ ಟ್ರಕ್ ಮತ್ತು ಕಾರು ಎರಡನ್ನೂ ಹೆಚ್ಚಿನ ತನಿಖೆಗಾಗಿ ಶ್ರೀಪೆರಂಬದೂರು ಕಂದಾಯ ವಿಭಾಗೀಯ ಕಚೇರಿಗೆ ಕರೆದುಕೊಂಡುಹೋಗಿದ್ದು, ಘಟನೆ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಆದಾಯ ತೆರಿಗೆ ಅಧಿಕಾರಿಗಳು ಮತ್ತು ಕಾಂಚೀಪುರಂ ಜಿಲ್ಲಾ ಚುನಾವಣಾಧಿಕಾರಿಗಳು ಶ್ರೀಪೆರಂಬದೂರ್ ಕಂದಾಯ ಆಯುಕ್ತರ ಕಚೇರಿಯಲ್ಲಿ ತನಿಖೆ ನಡೆಸಿದ ನಂತರ ಚಿನ್ನದ ಕಡ್ಡಿಗಳ ಮೂಲ ಮತ್ತು ಉದ್ದೇಶದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈಗಾಗಲೇ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಆದರೆ ಇದೀಗ ನಡೆದಿರುವ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.












Click it and Unblock the Notifications