ಜಗನ್ ಆಪ್ತನಿಗೆ ಮತ್ತೆ ಬೇಲ್, ಅಯ್ಯಪ್ಪ ಮಹಿಮೆ

ಹೈದರಾಬಾದಿನ ನಾಂಪಲ್ಲಿಯಲ್ಲಿರುವ ಸಿಬಿಐ ನ್ಯಾಯಾಲಯ ಸೋಮವಾರ ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ಅವರಿಗೆ ಮದ್ಯಂತರ ಜಾಮೀನು ಮಂಜೂರು ಮಾಡಿದೆ. ಮೇ 24,2012ರಂದು ಜೈಲು ಸೇರಿದ್ದ ಮೋಪಿದೇವಿ ಅವರು 43 ದಿನಗಳ ಕಾಲ ಜೈಲಿನಿಂದ ಹೊರಗೆ ಉಳಿಯಲಿದ್ದಾರೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಗಳಿಕೆಯಲ್ಲಿ ಮೋಪಿದೇವಿ ಅವರ ಪಾಲಿದೆ ಎಂದು ಸಿಬಿಐ ಅವರನ್ನು ಜೈಲಿಗೆ ತಳ್ಳಿತ್ತು.
ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ಅವರ ಕನಸಿನ ಯೋಜನೆ VANPIC ಜಾಲಕ್ಕೆ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅಲಿಯಾಸ್ ಮ್ಯಾಟ್ರಿಕ್ಸ್ ಪ್ರಸಾದ್ ಅವರನ್ನು ಪ್ರಚಾರಕರಾಗಿ ಬಳಸಿಕೊಳ್ಳಲು ಮೋಪಿದೇವಿ ಕಾರಣರಾಗಿದ್ದರು. ಸುಮಾರು 850 ಕೋಟಿ ರು ಗೂ ಅಧಿಕ ಮೊತ್ತದ ಹಗರಣದಲ್ಲಿ ಮೋಪಿದೇವಿಗೂ ಪಾಲು ಸಿಕ್ಕಿದೆ. VANPIC ಗೆ ಸಂಬಂಧಿಸಿದ ಹೂಡಿಕೆಗಳೆಲ್ಲವೂ ಜಗನ್ ಒಡೆತನದ ಬೇನಾಮಿ ಸಂಸ್ಥೆಗಳ ಪಾಲಾಗಿರುವುದು ಸಾಬೀತಾಗಿದೆ.
ಬೇಲ್ ಏಕೆ?: ಮೋಪಿದೇವಿ ವೆಂಕಟರಮಣ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅಕ್ಟೋಬರ್ 31ರ ತನಕ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಇಬ್ಬರು ಶ್ಯೂರಿಟಿ ಹಾಗೂ 1 ಲಕ್ಷ ರು ಬಾಂಡ್ ಮೊತ್ತ ನೀಡಿ ಜಾಮೀನು ಪಡೆದಿದ್ದಾರೆ.
ಈ ಮುಂಚೆ ಕೂಡಾ ಮೋಪಿದೇವಿ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಡಿಸೆಂಬರ್ 24 ರಿಂದ ಜನವರಿ 2 ರ ತನಕ ಮೋಪಿದೇವಿ ಜಾಮೀನಿನ ಮೇಲೆ ಹೊರಗಿದ್ದರು. ಶಬರಿಮಲೆ ಮಾಲೆ ಧರಿಸಿದ್ದೇನೆ ನಾನು ಕೇರಳಕ್ಕೆ ಹೋಗಬೇಕಿದೆ ಎಂದು ಅರ್ಜಿ ಹಾಕಿದ್ದು ಫಲ ನೀಡಿತ್ತು. ಈಗ ಮತ್ತೊಮ್ಮೆ ಚಂಚಲಗುಡ ಜೈಲಿನಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಆದರೆ, ಆಪ್ತ ಮಿತ್ರ ಜಗನ್ ಗೆ ಮಾತ್ರ ಯಾವುದೇ ತಂತ್ರ ಮಾಡಿದರೂ ಜಾಮೀನು ಸಿಗುತ್ತಿಲ್ಲ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಜಗನ್ ಮೇಲಿನ ಕೇಸುಗಳನ್ನು ನಾಲ್ಕು ತಿಂಗಳಿನಲ್ಲಿ ಮುಕ್ತಾಯಗೊಳಿಸುವಂತೆ ಸಿಬಿಐ ತಂಡಕ್ಕೆ ಸುಪ್ರೀಂಕೊರ್ಟ್ ಕಳೆದ ಮೇ ತಿಂಗಳಿನಲ್ಲಿ ಆದೇಶಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಬಿಐ ವಿಶೇಷ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.18 ರಂದು ಕೈಗೆತ್ತಿಕೊಳ್ಳಲಿದೆ. ಕಳೆದ ವರ್ಷ ಮೇ 27ರಂದು ಜಗನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಹೈದರಾಬಾದಿನ ಚಂಚಲಗುಡ ಜೈಲಿನಲ್ಲಿದ್ದಾರೆ. ನ್ಯಾಯಾಂಗ ಬಂಧನ ಸೆ.20ರ ತನಕ ಇದ್ದು ಸಿಬಿಐ ಮತ್ತೆ ಮತ್ತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಮೂಲಕ ಪ್ರಕರಣವನ್ನು ವಿಳಂಬಗೊಳಿಸುತ್ತಿದೆ.
ಆಂಧ್ರಪ್ರದೇಶದ ಅಳಿವು ಉಳಿವಿನ ಹೋರಾಟ ನಡೆಯುತ್ತಿದ್ದು ರಾಜಕೀಯ ಮುಖಂಡನಾಗಿ ನಾನು ಹೋರಾಟದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಜಗನ್ ಅರ್ಜಿ ಹಾಕಿದ್ದಾರೆ. ನಾಳೆ ಏನಾಗುತ್ತೋ ಕಾದು ನೋಡೋಣ..












Click it and Unblock the Notifications