ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್ ಕೌಂಟರ್
ಹೈದರಾಬಾದ್, ಡಿಸೆಂಬರ್ 6 : ಹೈದರಾಬಾದ್‌ನ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗಳು ಎನ್ ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಗುರುವಾರ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಶುಕ್ರವಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಪೊಲೀಸರು ನಡೆಸಿದ ಎನ್ ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್ ಕೌಂಟರ್ ನಡೆದಿದೆ.
ಏಳು ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿತ್ತು. ಗುರುವಾರ ಬೆಳಗ್ಗೆ ನ್ಯಾಯಾಂಗ ಬಂಧನಲ್ಲಿದ್ದ ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಇಂದು ಬೆಳಗ್ಗೆ ಎನ್ ಕೌಂಟರ್ ನಡೆಸಲಾಗಿದೆ.
ಪೊಲೀಸರು ಮಹಜರು ಮಾಡಲು ಆರೋಪಿಗಳನ್ನು ಅತ್ಯಾಚಾರ, ಹತ್ಯೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಓಡಿ ಹೋಗಲು ಪ್ರಯತ್ನ ನಡೆಸಿದ್ದಾರೆ. ಆಗ ಪೊಲೀಸರು ಗುಂಡು ಹಾರಿಸಿದ್ದು, ಎಲ್ಲರೂ ಮೃತಪಟ್ಟಿದ್ದಾರೆ.

ಜೀವಂತವಾಗಿ ಸುಟ್ಟಿದ್ದರು
ನವೆಂಬರ್ 27ರಂದು ರಾತ್ರಿ 27 ವರ್ಷದ ಪಶುವೈದ್ಯೆಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪಿಗಳು ಆಕೆಯನ್ನು ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿದ್ದರು. ನಾವು ಬೆಂಕಿ ಹಚ್ಚುವಾಗ ಆಕೆ ಬದುಕಿದ್ದಳು ಎಂದು ಗುರುವಾರ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.

ಕಠಿಣ ಶಿಕ್ಷೆಗೆ ಒತ್ತಾಯ ಕೇಳಿ ಬಂದಿತ್ತು
ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈಗ ಪೊಲೀಸರ ಎನ್ ಕೌಂಟರ್‌ನಲ್ಲಿ ಅರೋಪಿಗಳು ಮೃತಪಟ್ಟಿದ್ದಾರೆ.

ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಪೊಲೀಸ್
ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳು ಪೆಟ್ರೋಲ್ ಸುರಿದು ಆಕೆಯನ್ನು ಸುಡಲು ಪ್ರಯತ್ನಿಸಿದ್ದರು. ನವೆಂಬರ್ 27ರಂದು ಸಂತ್ರಸ್ತೆಯ ಶವ ಪತ್ತೆಯಾಗಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನವೆಂಬರ್ 28ರಂದು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಇರುವಾಗ ಜನರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಮಹಜರು ಮಾಡಿರಲಿಲ್ಲ
ಆರೋಪಿಗಳು ಪೊಲೀಸ್ ಠಾಣೆಯಲ್ಲಿ ಇರುವಾಗ ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದ್ದರಿಂದ, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಮತ್ತು ಸ್ಥಳದ ಮಹಜರು ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಶುಕ್ರವಾರ ಆರೋಪಿಗಳನ್ನು ಮಹಜರು ಮಾಡಲು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು.












Click it and Unblock the Notifications