ದಾಸ್ ಮಹಾನ್ ಭ್ರಷ್ಟ : ಆರ್ಬಿಐ ಗವರ್ನರ್ ಮೇಲೆ ಡಾ. ಸ್ವಾಮಿ ವಾಗ್ದಾಳಿ
ಹೈದರಾಬಾದ್, ಡಿಸೆಂಬರ್ 24 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅವರನ್ನು ನೇಮಕ ಮಾಡಿದ್ದನ್ನು ಕಟುಮಾತುಗಳಿಂದ ಟೀಕಿಸಿದ್ದ ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಮತ್ತೆ ಅವರ ಮೇಲೆ 'ಭ್ರಷ್ಟಾಚಾರ'ದ ಆರೋಪ ಹೊರಿಸಿದ್ದಾರೆ.
ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ ನಂತರ, ಶಕ್ತಿಕಾಂತ್ ದಾಸ್ ಅವರನ್ನು ಗವರ್ನರ್ ಆಗಿ ನೇಮಕಾತಿ ಮಾಡಿದಂದಿನಿಂದಲೂ ಅವರ ಮೇಲೆ ಆರ್ಥಿಕ ತಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಬೆಂಕಿ ಉಗುಳುತ್ತಲೇ ಇದ್ದಾರೆ. ಆದರೆ, ಯಾವ ರೀತಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ವಿವರ ನೀಡಿಲ್ಲ.
ದಾಸ್ ಅವರ ಬದಲಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರಿನಲ್ಲಿ ಪ್ರೊಫೆಸರ್ ಆಗಿದ್ದ ಆರ್ ವೈದ್ಯನಾಥನ್ ಅವರು ಉತ್ತಮ ಆಯ್ಕೆಯಾಗುತ್ತಿದ್ದರು. ವೈದ್ಯನಾಥನ್ ನಮ್ಮವರು ಮತ್ತು ಸಂಘ ಪರಿವಾರದವರು ಎಂದು ಸ್ವಾಮಿ ಪತ್ರಕರ್ತರಿಗೆ ತಿಳಿಸಿದರು.

ಇದೇ ಸಮಯದಲ್ಲಿ ಎಸ್ ಗುರುಮೂರ್ತಿಯನ್ನು ಆರ್ಬಿಐ ಮಂಡಳಿಗೆ ಆಯ್ಕೆ ಮಾಡಿದ್ದನ್ನೂ ತೀವ್ರವಾಗಿ ಟೀಕಿಸಿದ ಅವರು, ಇದು ಸರಕಾರ ಮಾಡಿದ ಪ್ರಮಾದ ಎಂದು ಆಕ್ರೋಶ ವ್ಯಕ್ತಪಡಿಸಿದರು. ಊರ್ಜಿತ್ ಪಟೇಲ್ ಅವರು ತೊರೆದ ನಂತರ ಡಿಸೆಂಬರ್ 11ರಂದು ಶಕ್ತಿಕಾಂತ್ ದಾಸ್ ಅವರನ್ನು ಗವರ್ನರಾಗಿ ಸರಕಾರ ನೇಮಿಸಿದೆ.
"ಆರ್ಬಿಐ ಗವರ್ನರ್ ಆಗಿರುವ ದಾಸ್ ಅವರು ಭಾರೀ ಭ್ರಷ್ಟ. ಅವರನ್ನು ಹಿಂದೆ ಹಣಕಾಸು ಇಲಾಖೆಯಿಂದ ತೆಗೆಸಿಹಾಗಿದ್ದೆ. ಅಂಥವರನ್ನು ವಾಪಸ್ ಕರೆತಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಮಾಡಿದ್ದು ಅಚ್ಚರಿ ತಂದಿದೆ" ಎಂದು ಇಂಡಿಯನ್ ಬಿಸಿನೆಸ್ ಸ್ಕೂಲ್ ನಲ್ಲಿ ನಡೆದ ಸಂವಾದದಲ್ಲಿ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿದ್ದಾಗ, ಆಗ ಹಣಕಾಸು ಸಚಿವಾಲಯದಲ್ಲಿ ಇದ್ದ ಗುರುಮೂರ್ತಿ ಹಸ್ತಕ್ಷೇಪ ಮಾಡಲು ಮತ್ತು ಚಿದಂಬರಂ ಅವರನ್ನು ಕಾಪಾಡಲು ಯತ್ನಿಸಿದ್ದರು. ದಾಸ್ ಅವರು ಚಿದಂಬರಂ ಅವರ ಚೇಲಾ (ಶಿಷ್ಯ). ಅವರು ಚೆನ್ನೈನಲ್ಲಿ ಇದ್ದಾಗ ಬೇಕಾದಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಹೊರಿಸಿದರು.
ಪತ್ರಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯ ಬಗ್ಗೆ ಕೇಳಿದಾಗ, ನರೇಂದ್ರ ಮೋದಿ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲ. ಹೀಗಾಗಿ, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ರಾಹುಲ್ ಬಗ್ಗೆ ಪ್ರಸ್ತಾಪಿಸಿದಾಗ, ರಾಹುಲ್ ಗಾಂಧಿ ಬ್ರಿಟಿಷ್ ನಾಗರಿಕ, ಅವರು ಭಾರತದ ಪ್ರಧಾನಿ ಆಗಲು ಸಾಧ್ಯವೇ ಇಲ್ಲ ಎಂದು ನುಡಿದರು.












Click it and Unblock the Notifications