ಆಂಧ್ರದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 1 ವರ್ಷದ ಬಾಲಕ
ಹೈದರಾಬಾದ್, ನವೆಂಬರ್ 28 : ಆಂಧ್ರಪ್ರದೇಶದ ಪುಲಕಲ್ ಮಂಡಲ ಎಂಬಲ್ಲಿ 3 ವರ್ಷದ ಬಾಲಕನೊಬ್ಬ ವಿಫಲಗೊಂಡ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಪೊಲೀಸರು ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಆಂಧ್ರಪ್ರದೇಶದ ಮೆದಕ್ ಜಿಲ್ಲೆಯ ಪುಲಕಲ್ ಮಂಡಲ ಎಂಬಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕೊಳವೆ ಬಾವಿಗೆ ಬಿದ್ದ ಬಾಲಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ. ಬೆಳಗ್ಗೆ 8.45ರ ಸುಮಾರಿಗೆ ರಾಕೇಶ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]

ರಾಕೇಶ್ ಕೊಳವೆ ಬಾವಿಗೆ ಬಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ವೈದ್ಯಕೀಯ ತಂಡದವರು ಒಂದು ಗಂಟೆಯಲ್ಲಿಯೇ ಸ್ಥಳಕ್ಕೆ ಆಗಮಿಸಿದ್ದಾರೆ. ರಾಕೇಶ್ ರಕ್ಷಿಸಲು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. [ಕೊಳೆವೆ ಬಾವಿ ದುರಂತ ಏಕೆ ತಡೆಯಲಾಗುತ್ತಿಲ್ಲ?]
ಆಟವಾಡುತ್ತಾ ಬಾವಿಗೆ ಬಿದ್ದ : ಶನಿವಾರ ಬೆಳಗ್ಗೆ ತಂದೆ-ತಾಯಿಯ ಜೊತೆ ಹೊಲಕ್ಕೆ ತೆರಳಿದ್ದ ರಾಕೇಶ್, ಹೊಲದ ಪಕ್ಕದಲ್ಲಿ ಆಡವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದಿದ್ದಾನೆ. ಬಾವಿ ಕೊರೆಸಿದ್ದ ಜಮೀನು ಮಾಲೀಕ, ಅದನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದು ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಆಗ ಕೊಳವೆಬಾವಿಯಿಂದ ಮಗುವಿನ ಅಳು ಕೇಳಿಸಿದೆ. ಅಲ್ಲಿಗೆ ತೆರಳಿ ನೋಡಿದಾಗ ಮಗು ಬಾವಿಗೆ ಬಿದ್ದಿರುವುದು ತಿಳಿದುಬಂದಿದೆ.












Click it and Unblock the Notifications