ಇನ್ನು ಮುಂದೆ ಹೈದರಾಬಾದ್ ತೆಲಂಗಾಣಕ್ಕೆ ಮಾತ್ರ ರಾಜಧಾನಿ
ಹೈದರಾಬಾದ್, ಜೂನ್ 03: ಇನ್ನು ಮುಂದೆ ಹೈದರಾಬಾದ್ ನಗರ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಜಂಟಿ ರಾಜಧಾನಿಯಲ್ಲ. ತೆಲಂಗಾಣ ರಾಜಧಾನಿಯಾಗಿ ಹೈದರಾಬಾದ್ ಮುಂದುವರೆಯಲಿದ್ದು, ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಘೋಷಣೆಗಾಲಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಭಜನೆ ಸಂದರ್ಭದಲ್ಲಿ 10 ವರ್ಷಗಳ ಕಾಲ ಹೈದರಾಬಾದ್ ನಗರ ಎರಡೂ ರಾಜ್ಯಗಳಿಗೆ ಜಂಟಿ ರಾಜಧಾನಿ ಎಂದು ನಿಯಮ ರೂಪಿಸಲಾಗಿತ್ತು. 2024ರ ಜೂನ್ 2ಕ್ಕೆ ಈ ನಿಯಮ ಅಂತ್ಯಗೊಂಡಿದ್ದು, ಹೈದರಾಬಾದ್ ರಾಜಧಾನಿಯಾಗಿ ತೆಲಂಗಾಣ ಇರಲಿದೆ.

ಆಂಧ್ರ ಪ್ರದೇಶ ಮರು ಸಂಘಟನೆ ಕಾಯ್ದೆ 2014ರ ಪ್ರಕಾರ ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಲಿದೆ. ಆಂಧ್ರ ಪ್ರದೇಶ ಸರ್ಕಾರ ಹೊಸ ರಾಜಧಾನಿಯನ್ನು ಘೋಷಣೆ ಮಾಡಬೇಕಿದೆ. ಆಂಧ್ರ ಪ್ರದೇಶದ ಹೊಸ ರಾಜಧಾನಿ ಯಾವುದು? ಎಂಬುದು ಇನ್ನೂ ಘೋಷಣೆಯಾಗಿಲ್ಲ.
ಹೊಸ ಸರ್ಕಾರ ಅಸ್ತಿತ್ವಕ್ಕೆ: 2024ರ ಲೋಕಸಭೆ ಚುನಾವಣೆ ಜೊತೆಗೆ ಆಂಧ್ರ ಪ್ರದೇಶದಲ್ಲಿ ಮೇ 13ರಂದು 175 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಜೂನ್ 4ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಈ ಬಾರಿ ಚುನಾವಣೆಯಲ್ಲಿ ವೈಎಸ್ಆರ್‌ಪಿ ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾರೀ ಪೈಪೋಟಿ ಎದುರಿಸುತ್ತಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಒಂದಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ.
ಮಂಗಳವಾರ ಆಂಧ್ರ ಪ್ರದೇಶ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಹೊಸ ರಾಜಧಾನಿಯನ್ನು ಘೋಷಣೆ ಮಾಡಲಿದೆ. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ಅಮರಾವತಿಯನ್ನು ನೂತನ ರಾಜಧಾನಿಯಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ವೈಎಸ್ಆರ್‌ಪಿ ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜ್ಯಕ್ಕೆ ಮೂರು ರಾಜಧಾನಿ ಮಾಡುವ ತಯಾರಿಯಲ್ಲಿದ್ದರು. ಆದ್ದರಿಂದ ಹೊಸ ರಾಜಧಾನಿ ಘೋಷಣೆಯಾಗಿಲ್ಲ. ಈಗ ಹೊಸ ಸರ್ಕಾರ ರಾಜ್ಯದ ಹೊಸ ರಾಜಧಾನಿ ಘೋಷಣೆ ಮಾಡಲಿದೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿಶಾಖಪಟ್ಟಣಂ ಆಡಳಿತಾತ್ಮಕ ರಾಜಧಾನಿಯಾಗಿ, ಅಮರಾವತಿ ಶಾಸಕಾಂಗ ರಾಜಧಾನಿಯಾಗಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಿ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ಹೇಳಿದ್ದಾರೆ. ಆದರೆ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಅಮರಾವತಿ ಮತ್ತು ವಿಶಾಖಪಟ್ಟಣಂಗಳನ್ನು ಆಂಧ್ರ ಪ್ರದೇಶದ ರಾಜಧಾನಿಯಾಗಿ ಮಾಡಬೇಕು ಎಂಬ ಕುರಿತು ಚರ್ಚೆಗಳಿವೆ. ಆದರೆ ಈ ಕುರಿತ ವಿವಾದ ನ್ಯಾಯಾಲಯದಲ್ಲಿದೆ. ಆದ್ದರಿಂದ ಅಂತಿಮ ತೀರ್ಮಾನ ಇನ್ನೂ ಆಗಿಲ್ಲ.
10 ವರ್ಷಗಳ ಕಾಲ ಆಂಧ್ರ ಪ್ರದೇಶಕ್ಕೆ ಬಿಟ್ಟುಕೊಟ್ಟಿದ್ದ ಕೆಲವು ಸರ್ಕಾರಿ ಕಟ್ಟಡಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದು ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಆಂಧ್ರ-ತೆಲಂಗಾಣ ನಡುವೆ ಇನ್ನೂ ಹಲವು ವಿಚಾರಗಳು ಇತ್ಯರ್ಥವಾಗಬೇಕಿದೆ.
2014ರಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಭಜನೆ ಸಂದರ್ಭದಲ್ಲಿ 2014ರ ಜೂನ್ 2ರಿಂದ 10 ವರ್ಷಗಳನ್ನು ಮೀರದಂತೆ ಉಭಯ ರಾಜ್ಯಗಳಿಗೆ ಹೈದರಾಬಾದ್ ನಗರವನ್ನು ಉಭಯ ರಾಜ್ಯಗಳ ರಾಜಧಾನಿಯಾಗಿ ಮಾಡಲಾಗಿತ್ತು.
ಈ ಅವಧಿ ಪೂರ್ಣಗೊಂಡ ಬಳಿಕ ಹೈದರಾಬಾದ್ ತೆಲಂಗಾಣ ರಾಜಧಾನಿಯಾಗಿ ಮುಂದುವರೆಯಲಿದೆ. ಆಂಧ್ರ ಪ್ರದೇಶಕ್ಕೆ ಹೊಸ ರಾಜಧಾನಿ ಘೋಷಣೆಯಾಗಬೇಕು ಎಂದು ಆಂಧ್ರ ಪ್ರದೇಶ ಪುನರ್ ರಚನೆ ಕಾಯ್ದೆ 2014ರ ಕಲಂ 5(1)ರಲ್ಲಿ ತಿಳಿಸಲಾಗಿತ್ತು. 2024ರ ಜೂನ್ 2ಕ್ಕೆ ನಿಯಮ ಪೂರ್ಣಗೊಂಡಿದ್ದು, ಹೈದರಾಬಾದ್ ನಗರ ಸೋಮವಾರದಿಂದ ತೆಲಂಗಾಣ ರಾಜ್ಯಕ್ಕೆ ಮಾತ್ರ ರಾಜಧಾನಿಯಾಗಿದೆ.












Click it and Unblock the Notifications