ಬಿಸಿಲಿನ ಹೊಡೆತಕ್ಕೆ 600ಕ್ಕೂ ಅಧಿಕ ಮಂದಿ ಬಲಿ
ಹೈದರಾಬಾದ್, ಮೇ.24: ದೇಶದ ಹಲವೆಡೆ ಬಿಸಿಲಿನ ಉರಿ ತಾಪಕ್ಕೆ ಬೆಂದು ನೂರಾರು ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನೆಲ, ಗಾಳಿ, ವಾತಾವರಣ ಕಾದ ಕೆಂಡದಂತೆ ಜೀವಸಂಕುಲಕ್ಕೆ ಮಾರಕವಾಗಿದೆ.
ಕಳೆದ ಐದು ದಿನಗಳಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಬಿಸಿಲಿನ ತಾಪಕ್ಕೆ ಬಲಿಯಾದವರ ಸಂಖ್ಯೆ 600ರ ಗಡಿ ದಾಟುತ್ತಿದೆ. ಸೂರ್ಯನ ತೀಕ್ಷ್ಣ ಕಿರಣಗಳು ಅನೇಕರ ಚರ್ಮಗಳನ್ನು ಸುಟ್ಟು ಹಾಕಿದೆ. ಪ್ರಾಣ ಪಕ್ಷಿಗಳು ಕೂಡಾ ತಂಪು ಜಾಗ ಅರಸಿ ಅಲೆದಾಡಿ ಬಸವಳಿಯುತ್ತಿರುವ ದೃಶ್ಯ ಕಂಡು ಬಂದಿದೆ. [2014ರಲ್ಲಿ ದೆಹಲಿ ಜನರ ಮೇಲೆ ಬಿರುಬಿಸಿಲಿನ ಪ್ರತಾಪ ]
ಎಲ್ಲೆಲ್ಲಿ ಸಮಸ್ಯೆ: ಆಂಧ್ರ, ತೆಲಂಗಾಣ ಅಲ್ಲದೆ, ತಮಿಳುನಾಡಿನ ಹಲವೆಡೆ ತಾಪಮಾನ ಏರಿಕೆ ಕಂಡು ಬಂದಿದೆ. ಉತ್ತರ ಕರ್ನಾಟಕದ ರಾಯಚೂರು, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ ಏರಿಳಿತ ಕಾಣುತ್ತಿದೆ. ಎರಡು ದಿನ ಮಳೆ, ಮತ್ತೆರಡು ದಿನ ಬಿರು ಬಿಸಿಲಿನ ಆಟದಿಂದ ಜನ ತತ್ತರಿಸುತ್ತಿದ್ದಾರೆ.['ಗೌರಿ' ಹಸುವಿಗೆ ಬಾಯಾರಿಕೆಯಾದಾಗ...]
ಭಾರತದ ಉಳಿದೆಡೆಗಳಲ್ಲಿ ರಾಜಧಾನಿ ನವದೆಹಲಿ, ಪಶ್ಚಿಮ ಬಂಗಾಳ, ಒಡಿಶಾ, ಪಂಜಾಬ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭದ ಬಹುತೇಕ ಭಾಗಗಳು ಮತ್ತು ಉತ್ತರ ಪ್ರದೇಶ, ಛತ್ತೀಸ್‌ಗಢ, ಮರಾಠವಾಡ ಸೇರಿದಂತೆ ಹಲವೆಡೆ ಬಿಸಿಲಿನ ರುದ್ರನರ್ತನ ಮುಂದುವರೆದಿದೆ.
ಬಿಸಿಲಿನ ಜೊತೆಗೆ ಹರ್ಯಾಣ, ರಾಜಸ್ಥಾನ ಮುಂತಾದೆಡೆ ಧೂಳು ತುಂಬಿದ ಬಿರುಗಾಳಿ ಬೀಸುತ್ತಿದ್ದು, ಎಲ್ಲೆಡೆ 42 ಡಿಗ್ರಿ ಸೆಲ್ಸಿಯಸ್ ನಿಂದ 48 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ದಾಖಲಾಗಿದೆ. ಜನ ಕೂರಲು ಆಗದೆ, ನಿಲ್ಲಲು ಆಗದೆ, ಉಸಿರಾಡಲೂ ಆಗದೆ ಪರಿತಪಿಸುತ್ತಿದ್ದಾರೆ.

47-48 ಡಿಗ್ರಿ ಉಷ್ಣಾಂಶ ದಾಖಲೆ
ಆಂಧ್ರ ಹಾಗೂ ತೆಲಂಗಾಣದ ಹಲವೆಡೆ ಸರಾಸರಿ ಉಷ್ಣಾಂಶ 47-48 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಹಗಲಿನ ಹೊತ್ತು ಮನೆ ಬಿಟ್ಟು ಹೊರಕ್ಕೆ ಹೋಗಲು ಜನರು ಅಂಜುತ್ತಿದ್ದಾರೆ. ಬೆಳ್ಳಂಬೆಳ್ಳಗೆ ಎದ್ದು ಕಚೇರಿಗೆ ಹೋಗಿ ಎಸಿ ಆನ್ ಮಾಡಿ ಸಂಜೆ ಸೂರ್ಯ ಮುಳುಗಿದ ಮೇಲೆ ಹೊರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಮನೆ ಇಲ್ಲದೆ ಬೀದಿ ಬದಿ ಮಲಗುತ್ತಿದ್ದ ನಿರ್ಗತಿಕರು, ಪಾರ್ಕ್ ಬೆಂಚಿನ ಮೇಲೆ ಒರಗುತ್ತಿದ್ದವರು ಎಲ್ಲೂ ಕಾಣುತ್ತಿಲ್ಲ

ತಾತ್ಕಾಲಿಕ ನೀರು ಕೇಂದ್ರಗಳ ಸ್ಥಾಪನೆ
ಅಪ್ಪಿ ತಪ್ಪಿ ರೋಡಿಗಿಳಿದ ದಾರಿ ಹೋಕರ ದಾಹ ತಣಿಸಲು ಅಲ್ಲಲ್ಲಿ ನೀರು, ನೀರು ಮಜ್ಜಿಗೆ, ಪಾನಕ ವಿತರಣೆ ನಡೆಯುತ್ತಿದೆ. ಪ್ರಾಣಿ ಪ್ರಿಯರು ಅನೇಕ ಕಡೆ ಪಶುಪಕ್ಷಿಗಳಿಗೆ ನೀರುಣಿಸುವ ಯತ್ನ ನಡೆಸಿದ್ದಾರೆ. ಪ್ರತಿ ಗಾಮಕ್ಕೊಂದು ತಣ್ಣನೆಯ ಕುಡಿಯುವ ನೀರು ವಿತರಣಾ ಕೇಂದ್ರ ಸ್ಥಾಪಿಸುವಂತೆ ಆಂಧ್ರ ಸರಕಾರ ಜಿಲ್ಲಾಡಳಿತಗಳಿಗೆ ಆದೇಶಿಸಿದೆ.

ಟ್ರಾಫಿಕ್ ಸಮಸ್ಯೆ ಎಲ್ಲೂ ಇಲ್ಲ
ಸದಾ ಪ್ರತಿಭಟನಾ ಮೆರವಣಿಗೆ, ಟ್ರಾಫಿಕ್ ಜಾಮ್ ಗಳಿಂದ ತುಂಬಿರುತ್ತಿದ್ದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ.ಆಂಧ್ರದ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರು, ಪ್ರಕಾಶಂ, ನೆಲ್ಲೂರು, ಚಿತ್ತೂರು, ಕಡಪಾ ಮತ್ತು ಕರ್ನೂಲುಗಳಲ್ಲಿ ಬಿಸಿಲಿನ ಝಳಕ್ಕೆ ಜನ ರಸ್ತೆಗಿಳಿಯಲು ಹೆದರುತ್ತಿದ್ದಾರೆ.

ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು
ಆಂಧ್ರ ಹಾಗೂ ತೆಲಂಗಾಣದಲ್ಲಿ ಸಾವಿನ ಸಂಖ್ಯೆ ನಿಖರವಾಗಿ ತಿಳಿಯುತ್ತಿಲ್ಲ. ಜೊತೆಗೆ ಸನ್ಸ್ಟ್ರೋಕ್ ಗೆ ಒಳಗಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ತುರ್ತು ವೈದ್ಯಕೀಯ ನೆರವು ನೀಡುವಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ವಿಶಾಖಪಟ್ಟಣ, ಶ್ರೀಕಾಕುಳಂ, ಗುಂಟೂರು ಜಿಲ್ಲೆಗಳಲ್ಲಿ ಸಾವುನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಇನ್ನೂ ಚಿಕಿತ್ಸಕರ ಕೊರತೆ ಇದ್ದು, ಜನಕ್ಕೆ ಸಮಸ್ಯೆ ಅರಿವಾಗುವ ಮೊದಲೇ ಪ್ರಾಣಪಕ್ಷಿ ಹಾರಿಹೋಗುತ್ತಿರುವ ದುರಂತ ಪರಿಸ್ಥಿತಿ ಕಂಡು ಬಂದಿದೆ.

ರಣ ಬಿಸಲು, ಇದು ಎಲ್‌ನಿನೊ ಎಫೆಕ್ಟ್
ಪೆಸಿಫಿಕ್ ಸಮುದ್ರದ ಮೇಲ್ಪದರದ ತಾಪಮಾನ ಹೆಚ್ಚುವುದರಿಂದ ಏಷ್ಯಾದಲ್ಲಿ ಹವಾಮಾನ ವೈಪರೀತ್ಯಗಳು ಉಂಟಾಗುತ್ತವೆ. ಭಾರತದ ಮುಂಗಾರಿನ ಮೇಲೆ ಇದು ಪ್ರಭಾವ ಬೀರಲಿದೆ. ಇಂಥ ತೀವ್ರ ಬಿಸಿಗಾಳಿ ಬೀಸಲು ಎಲ್‌ನಿನೊ ಎಫೆಕ್ಟ್ ಕಾರಣ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಮಥುರಾದಲ್ಲಿ ಮಕ್ಕಳ ಮೇಲೆ ಗಾಳಿ ದಾಳಿ
ಮಥುರಾದಲ್ಲಿ ಮಕ್ಕಳ ಮೇಲೆ ಮರಳುಮಿಶ್ರಿತ ಬಿಸಿ ಗಾಳಿ ದಾಳಿ ನಡೆಸಿದ್ದು ಹೀಗೆ. ಮೇ.25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಪ್ರದೇಶದಲ್ಲಿ ಎನ್ಡಿಎ ಸರ್ಕಾರದ ವರ್ಷಾಚರಣೆ ಸಂಭ್ರಮ ಆಚರಿಸಲು ಬರುತ್ತಿದ್ದಾರೆ.

ಜೈಪುರದಲ್ಲಿ ಅನೆಗೆ ಜಳಕದ ಪುಳಕ
ಜೈಪುರ ಹಾಗೂ ದೆಹಲಿ ರಸ್ತೆಯ ಸಮೀಪದ ಆನೆಯೊಂದು ಬಿಸಿಲು ತಪ್ಪಿಸಿಕೊಳ್ಳಲು ಕಂಡು ಕೊಂಡ ಮಾರ್ಗ.

ಉತ್ತರ ಭಾರತದಲ್ಲಿ ದಿನನಿತ್ಯದ ದೃಶ್ಯ
ಉತ್ತರ ಭಾರತದಲ್ಲಿ ದಿನನಿತ್ಯದ ದೃಶ್ಯ ಇದಾಗಿದ್ದು, ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಅಲಹಾಬಾದಿನಲ್ಲಿ ರೈಲು ನಿಲ್ದಾಣದಲ್ಲಿ
ಅಲಹಾಬಾದಿನಲ್ಲಿ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ನೀರಿನ ಪೈಪ್ ಬಳಸಿಕೊಂಡು ಸ್ನಾನ ಮಾಡುತ್ತಿದ್ದಾರೆ. 46 ಡಿಗ್ರಿ ತಾಪಮಾನಕ್ಕೆ ಎಲ್ಲರೂ ತತ್ತರಿಸುತ್ತಿದ್ದಾರೆ.

ನವದೆಹಲಿಯಲ್ಲಿ ಹುಡುಗರ ಪಾಡು
ನವದೆಹಲಿಯಲ್ಲಿ ಹುಡುಗರ ಪಾಡು ಹೀಗಿದೆ. ಇಂಡಿಯಾ ಗೇಟ್ ಬಳಿ ಸಿಕ್ಕಿ ದೃಶ್ಯ ಪಿಟಿಐಗಾಗಿ ಸೆರೆ ಹಿಡಿದಿದ್ದು ಮನ್ವೀಂದರ್ ವಶಿಷ್ಠ.

ದಿಮಾಪುರದಲ್ಲಿ ನಾಗಗಳ ಸ್ನಾನ
ನಾಗಾಲ್ಯಾಂಡಿನ ಯುವಕ, ಯುವತಿಯರು ದಿಮಾಪುರದಲ್ಲಿ ಸಣ್ಣ ತೊರೆಗೆ ಮೈಯೊಡ್ಡಿ ನಿಂತು ಬಿಸಿಲಿನ ಸವಾಲು ಸ್ವೀಕರಿಸಿದ್ದಾರೆ.

ಭಟಿಂಡಾದಲ್ಲಿ ಮಕ್ಕಳ ನೀರಾಟ
ಭಟಿಂಡಾದಲ್ಲಿ ಮಕ್ಕಳ ನೀರಾಟ, ಈಜಟ ಜೋರಾಗಿದೆ. ಶ್ರೀಹಿಂದ್ ಕಾಲುವೆಯಲ್ಲಿ ಮಕ್ಕಳ ಈಜು.

ಕಾಶ್ಮೀರದಲ್ಲಿ ನೀರಿನಲ್ಲಿ ನೀರೆಯರು
ಕಾಶ್ಮೀರದ ರಣಬೀರ್ ಕಾಲುವೆಯಲ್ಲಿ ನೀರೆಯರ ಆಟ.

ಲಕ್ನೋದಲ್ಲಿ ಟ್ರಾಫಿಕ್ ಪೊಲೀಸ್
ಲಕ್ನೋದಲ್ಲಿ ಟ್ರಾಫಿಕ್ ಪೊಲೀಸ್ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಿಸಿಲಿನ ತಾಪ ತಗ್ಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. PTI Photo by Nand Kumar

ಗುರ್ ಗಾಂವ್ ನಲ್ಲಿ ಮಹಿಳೆಯರು
ಗುರ್ ಗಾಂವ್ ನಲ್ಲಿ ಮಹಿಳೆಯರು ಬಿಸಿಲಿನ ತಾಪಕ್ಕೆ ಬೆಂದು ಹೋಗುತ್ತಿದ್ದಾರೆ.












Click it and Unblock the Notifications