ಹೈದರಾಬಾದ್ ಗ್ಯಾಂಗ್ ರೇಪ್ ಪ್ರಕರಣ: ಎಐಎಂಐಎಂ ಶಾಸಕನ ಪುತ್ರ ಭಾಗಿ
ಹೈದರಾಬಾದ್ ಜೂನ್ 07: ಕಳೆದ ವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಐಎಂಐಎಂ ಶಾಸಕರೊಬ್ಬರ ಪುತ್ರನೂ ಭಾಗಿಯಾಗಿದ್ದಾನೆ ಎಂದು ತೆಲಂಗಾಣ ಪೊಲೀಸರು ಮಂಗಳವಾರ ಬಹಿರಂಗಪಡಿಸಿದ್ದಾರೆ. ಈತ ಅಪ್ರಾಪ್ತ ಎಂದು ಹೇಳಲಾಗುತ್ತಿರುವ ಆರನೇ ಆರೋಪಿಯಾಗಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಎಲ್ಲಾ ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.
ಮಂಗಳವಾರದಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಈ ಬಗ್ಗೆ ಮಾತನಾಡಿ, ''ಎಲ್ಲಾ 6 ಆರೋಪಿಗಳು ನಮ್ಮ ವಶದಲ್ಲಿದ್ದಾರೆ. ಈ ಪೈಕಿ 5 ಮಂದಿ ಅಪ್ರಾಪ್ತರು'' ಎಂದು ತಿಳಿಸಿದ್ದಾರೆ. ಸಾದುದ್ದೀನ್ ಮಲಿಕ್ ಪ್ರಮುಖ ಆರೋಪಿಯಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇವರಲ್ಲಿ 4 ಆರೋಪಿಗಳು ರಾಜಕೀಯ ಕುಟುಂಬಗಳಿಗೆ ಸಂಬಂಧಿಸಿದವರು ಎಂದು ಸಿವಿ ಆನಂದ್ ಹೇಳಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 28 ರಂದು, ಹೈದರಾಬಾದ್‌ನ ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪಾರ್ಟಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ 17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಕಾರಿನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಘಟನೆ ಕುರಿತು ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆಯ ನಂತರ ಇಡೀ ಹೈದರಾಬಾದ್‌ನಲ್ಲಿ ಆಕ್ರೋಶದ ಅಲೆ ಎದ್ದಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸಲು ಜನರು ಬೀದಿಗಿಳಿದಿದ್ದಾರೆ. ರಾಜಕೀಯ ವಾಗ್ವಾದಗಳು ಶುರುವಾಗಿವೆ.
ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ನಗರದ ಜ್ಯೂಬಿಲಿ ಹಿಲ್ಸ್‌ನಲ್ಲಿ ನಡೆದ 17 ವರ್ಷ ವಯಸ್ಸಿನ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಗುರುತನ್ನು ಬಹಿರಂಗ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ರಘುನಂದನ್ ರಾವ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 228A ಅಡಿಯಲ್ಲಿ ಶಾಸಕ ರಘುನಂದನ್ ರಾವ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕಾನೂನಿನ ಅನ್ವಯ ಅತ್ಯಾಚಾರಕ್ಕೆ ಗುರಿಯಾದ ಸಂತ್ರಸ್ತೆಯ ಗುರುತನ್ನು ಬಹಿರಂಗ ಮಾಡಬಾರದು. ಆದ್ರೆ ಶಾಸಕ ರಘುನಂದನ್ ರಾವ್ ಅವರು ಅಪ್ರಾಪ್ತ ಸಂತ್ರಸ್ತೆಯ ಫೋಟೋ ಹಾಗೂ ವಿಡಿಯೋವನ್ನು ರಿಲೀಸ್ ಮಾಡಿದ್ದರು ಎಂದು ಆರೋಪಿಸಲಾಗಿದೆ.












Click it and Unblock the Notifications