ಮಕ್ಕಳನ್ನು ಕೂಡಿಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಹೈದರಾಬಾದ್, ಮಾರ್ಚ್ 11 : ಇಬ್ಬರು ಮಕ್ಕಳನ್ನು ಪಕ್ಕದ ರೂಮಿನಲ್ಲಿ ಕೂಡಿ ಹಾಕಿ, ಇಪ್ಪತ್ತೈದು ವರ್ಷದ ಮಹಿಳೆಯನ್ನು ಬೆದರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಆಘಾತಕಾರಿ ಸಂಗತಿಯೆಂದರೆ, ಆಟೋ ಡ್ರೈವರ್ ಆಗಿರುವ ಮಹಿಳೆಯ ಗಂಡ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ, ಆಕೆಯ ನಾದಿನಿಯರ ಗಂಡಂದಿರೇ ಈ ಹೀನಾಯ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರ್ಯಾಣಾದಿಂದ ಇಲ್ಲಿ ವಲಸೆ ಬಂದಿದ್ದ ಮಹಿಳೆ ಮತ್ತು ಆಕೆಯ ಕುಟುಂಬ ಸಯೀದ್ ಹಿಲ್ಸ್ ನಲ್ಲಿ ನೆಲೆಸಿತ್ತು. ಗಂಡ ಆಟೋ ಡ್ರೈವರ್ ಆದರೆ, ಮಹಿಳೆ ದಿನಗೂಲಿ ನೌಕರಳಾಗಿ ಹೊಟ್ಟೆ ಹೊರೆಯುತ್ತಿದ್ದಳು.

ಶನಿವಾರ ರಾತ್ರಿ ಗಂಡ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯೊಳಗೆ ನುಗ್ಗಿದ ಮೂವರು ಧೂರ್ತರಲ್ಲಿ ಒಬ್ಬ ಮಕ್ಕಳನ್ನು ಪಕ್ಕದ ಕೋಣೆಯಲ್ಲಿ ಕೂಡಿ ಹಾಕಿದರೆ, ಇನ್ನಿಬ್ಬರು ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಎಸಗಿದ್ದಾರೆ.
ಆಕೆ ಕೂಗಿಕೊಳ್ಳಲು ಯತ್ನಿಸಿದಾಗ ಆಕೆಯ ಬಾಯಿಮುಚ್ಚಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾರೆ. ಗಂಡ ಮನೆಗೆ ಮರಳಿದಾಗ ತನ್ನ ಮೇಲಾದ ದೌರ್ಜನ್ಯದ ದಾರುಣ ಕಥೆಯನ್ನು ಮಹಿಳೆ ಹೇಳಿದ್ದಾಳೆ.
ಕೂಡಲೆ ಅವರಿಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿರುವ ಮಾಹಿತಿಯ ಮೇರೆಗೆ ಜಾಲ ಬೀಸಿದ ಪೊಲೀಸರು ಆಜಮ್ ಮತ್ತು ಅಮ್ಜದ್ ಎಂಬಿಬ್ಬರು ಸಹೋದರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications