ಹೈದರಾಬಾದ್ ನಲ್ಲಿ ಇಳಿದಿದ್ದ ಶಾಸಕರು ಅದೇ ಬಸ್ ಹತ್ತಬೇಕು
ಬೆಂಗಳೂರು, ಮೇ 18 : ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಇದೀಗ ತಾನೆ ಹೈದರಾಬಾದಿನಲ್ಲಿ ತಾಜ್ ಕೃಷ್ಣ ರೆಸಾರ್ಟಿನಲ್ಲಿ ಬಸ್ಸಿನಿಂದ ಇಳಿದಿದ್ದ ಕಾಂಗ್ರೆಸ್ ಶಾಸಕರು ಈಗ ಅದೇ ಬಸ್ಸನ್ನು ಹತ್ತಿ ಬೆಂಗಳೂರಿಗೆ ವಾಪಸ್ ಬರಬೇಕಾಗಿದೆ.
ಬಂಜಾರಾ ಹಿಲ್ಸ್ ನಲ್ಲಿರುವ ತಾಜ್ ಕೃಷ್ಣ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರು ಇಳಿದುಕೊಂಡಿದ್ದರೆ, ನೋವೋಟೆಲ್ ರೆಸಾರ್ಟಿನಲ್ಲಿ ಜಾತ್ಯತೀತ ಜನತಾದಳದ ಶಾಸಕರು ಬೀಡುಬಿಟ್ಟಿದ್ದರು. ಅವರು ಕೂಡ ಹತ್ತಿದ ಬಸ್ಸಿನಲ್ಲಿಯೇ, ಹೋದ ದಾರಿಗೆ ಸುಂಕವಿಲ್ಲವೆಂಬಂತೆ ಬೆಂಗಳೂರಿಗೆ ವಾಪಸ್ ಬರಬೇಕು.
ಈ ನಡುವೆ, ಹೇಗಪ್ಪಾ 112 ಶಾಸಕರನ್ನು ಸೇರಿಸುವುದು ಎಂಬ ಚಿಂತೆ, ಚಿಂತನೆಯಲ್ಲಿ ಬಿಜೆಪಿ ನಾಯಕ, ಮುಖ್ಯಮಂತ್ರಿಯಾಗಿ ಗುರುವಾರವೇ ಪ್ರಮಾಣವಚನ ಸ್ವೀಕರಿಸಿರುವ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ವೆಸ್ಟ್ ಎಂಡ್ ಹೋಟೆಲಿಗೆ ತೆರಳಿದ್ದಾರೆ ಎಂಬ ಸುದ್ದಿ ಬಂದಿದೆ. ಯಡಿಯೂರಪ್ಪನವರು ಸುಪ್ರೀಂ ಕೋರ್ಟ್ ಆದೇಶದಿಂದ ಸಿಡಿಮಿಡಿಗೊಂಡಿದ್ದಾರೆ ಎಂದೂ ತಿಳಿದುಬಂದಿದೆ.

ಯಡಿಯೂರಪ್ಪನವರು 7 ದಿನಗಳ ಕಾಲಾವಕಾಶ ಕೇಳಿದ್ದರೂ, ರಾಜ್ಯಪಾಲ ವಜುಭಾಯಿ ವಾಲಾ ಅವರು ಧಾರಾಳವಾಗಿ 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಕೇಳಬೇಕಲ್ಲ? ವಿಶ್ವಾಸಮತ ಯಾಚನೆಗೆ ಸ್ವಲ್ಪ ಕಾಲಾವಕಾಶ ಬಿಜೆಪಿ ಕೇಳಿದ್ದರೂ, ಅದನ್ನು ನ್ಯಾಯಮೂರ್ತಿಗಳು ಪುರಸ್ಕರಿಸಿಲ್ಲ. ಶನಿವಾರವೇ ವಿಶ್ವಾಸಮತ ಯಾಚಿಸಬೇಕು ಎಂದು ಆದೇಶಿಸಿದೆ.
ಮೊದಲು, ಶಾಸಕರೆಲ್ಲ ಕೊಚ್ಚಿಗೆ ಹೋಗುತ್ತಾರೆ ಎಂದುಕೊಂಡಿದ್ದರೆ, ಪತ್ರಕರ್ತರ ಕಣ್ಣುತಪ್ಪಿಸಿ ಶಾಸಕರೆಲ್ಲ ಹೈದರಾಬಾದಿಗೆ ಹೋಗಿದ್ದರು. ಪತ್ರಕರ್ತರು ಅಲ್ಲಿಯೂ ಅವರನ್ನು ಬೆನ್ನತ್ತಿದ್ದಾರೆ. ಎಲ್ಲರೂ ಸದನಕ್ಕೆ ಶನಿವಾರ ಹಾಜರಾಗಲೇಬೇಕಿದೆ. ಪ್ರಮಾಣ ಸ್ವೀಕರಿಸಿದ ನಂತರ ಮತದಾನದಲ್ಲಿ ಭಾಗಿಯಾಗಬೇಕಾಗಿದೆ. ಯಾರು ಯಾರಿಗೆ ಮತ ಹಾಕುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಮೇ 12ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ 78 ಸ್ಥಾನಗಳನ್ನು ಗಳಿಸಿದೆ. ಜೆಡಿಎಸ್ 38 ಸ್ಥಾನ ಪಡೆದಿದ್ದರೆ, ಎರಡು ಸ್ಥಾನಗಳು ಪಕ್ಷೇತರರ ಪಾಲಾಗಿವೆ. 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಿರುವುದು 112 ಸ್ಥಾನಗಳು. ಬಿಜೆಪಿ ಹೇಗೆ ಬಹುಮತ ಸಾಬೀತುಪಡಿಸುತ್ತದೆ ಎಂಬುದೇ ಚಿದಂಬರ ರಹಸ್ಯ.












Click it and Unblock the Notifications