ನಾಪತ್ತೆ ಪ್ರಕರಣ ಭೇದಿಸುವಾಗ ಹೊರಬಿದ್ದ ಸರಣಿ ಕೊಲೆಗಳ ಭೀಕರ ಸತ್ಯ
ಹೈದರಾಬಾದ್, ಏಪ್ರಿಲ್ 30: ತೆಲಂಗಾಣದಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾದ ಹತ್ತನೇ ತರಗತಿಯ ವಿದ್ಯಾರ್ಥಿಯೋರ್ವಳ ಬಗ್ಗೆ ತನಿಖೆ ನಡೆಸುವ ಸಂದರ್ಭದಲ್ಲಿ ಸರಣಿ ಕೊಲೆಗಳ ಭೀಕರ ಸತ್ಯವೊಂದು ಬಯಲಿಗೆ ಬಂದಿದೆ.
ಮೂರು ದಿನಗಳ ಹಿಂದೆ ತೆಲಂಗಾಣದ ಯಾದಾದ್ರಿ ಭುವನಗಿರಿ ಎಂಬಲ್ಲಿ ಹತ್ತು ವರ್ಷ ವಯಸ್ಸಿನ ಬಾಲಕಿಯೊಬ್ಬರು ಕಾಣೆಯಾಗಿದ್ದರು. ಬೇಸಿಗೆ ಶಿಬಿರಕ್ಕೆಂದು ಹೋಗಿದ್ದ ಬಾಲಕಿ ವಾಪಸ್ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ, ಬಾವಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಆ ಶವವನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆಯಾಗಿ ಪೊಲೀಸರಲ್ಲೂ ಆತಂಕ ಸೃಷ್ಟಿಸಿತ್ತು. ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಯುವತಿಯೊಬ್ಬರ ಶವ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ನಂತರ ಈ ಬಾವಿಯಿರುವ ಜಮೀನಿನ ಮಾಲೀಕ ಶ್ರೀನಿವಾಸ್ ರೆಡ್ಡಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಈ ಹಿಂದೆಯೂ ಒಂದು ಕೊಲೆ ಮತ್ತು ಕೆಲವು ಕ್ರಿಮಿನಲ್ ಕೇಸುಗಳಿದ್ದವು.
ತನ್ನ ಜಮೀನಿನ ದಾರಿಯಲ್ಲಿ ಬರುವ ಯುವತಿಯರನ್ನು ಆತನೇ ಅಪಹರಿಸಿ, ಅತ್ಯಾಚಾರ ಎಸಗಿ ಕೊಂದಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.
ಈ ಘಟನೆಗಳು ನಡೆಯುತ್ತಿರುವ ಹೊತ್ತಲ್ಲೇ 2015 ರಲ್ಲೇ ತಮ್ಮ ಮಗು ಇದೇ ಪ್ರದೇಶದಿಂದ ಕಾಣೆಯಾಗಿತ್ತು, ಆದರೆ ನಾವು ಭಯದಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ದಂಪತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.












Click it and Unblock the Notifications