ಜಗನ್ ಮೋಹನ್ ರೆಡ್ಡಿಗೆ ಜಾಮೀನು ಮಂಜೂರು
ಹೈದರಾಬಾದ್, ಸೆ.23: ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಸುಮಾರು ಒಂದು ವರ್ಷದ ನಂತರ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸೆ.23ರಂದು ಜಾಮೀನು ಮಂಜೂರು ಮಾಡಿದೆ.
ಹೈದರಾಬಾದಿನ ನಾಂಪಲ್ಲಿಯಲ್ಲಿರುವ ಸಿಬಿಐ ನ್ಯಾಯಾಲಯ ಸೋಮವಾರ ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ಅವರಿಗೆ ಮದ್ಯಂತರ ಜಾಮೀನು ಮಂಜೂರು ಮಾಡಿತ್ತು.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಜಗನ್ ಮೇಲಿನ ಕೇಸುಗಳನ್ನು ನಾಲ್ಕು ತಿಂಗಳಿನಲ್ಲಿ ಮುಕ್ತಾಯಗೊಳಿಸುವಂತೆ ಸಿಬಿಐ ತಂಡಕ್ಕೆ ಸುಪ್ರೀಂಕೊರ್ಟ್ ಕಳೆದ ಮೇ ತಿಂಗಳಿನಲ್ಲಿ ಆದೇಶಿದ್ದನ್ನು ಇಲ್ಲಿ ಸ್ಮರಿಸಬಹುದು. ಸಿಬಿಐ ವಿಶೇಷ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.18 ರಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಲಾಗಿದೆ.
ಸಿಬಿಐ ತಂಡ ಮಂಗಳವಾರ ಪ್ರತ್ಯೇಕವಾಗಿ ಚಾರ್ಜ್ ಶೀಟ್ ಸಲ್ಲಿಸಿ ಇನ್ನಷ್ಟು ಆರೋಪಿಗಳನ್ನು ಈ ಪ್ರಕರಣದಲ್ಲಿ ಹೆಸರಿಸಿದೆ. ಒಟ್ಟಾರೆ ತನಿಖೆ, ಚಾರ್ಚ್ ಶೀಟ್ ಸಲ್ಲಿಕೆಗೆ ಇನ್ನಷ್ಟು ಕಾಲ ಬೇಕು ಎಂದು ಸಿಬಿಐ ಅರ್ಜಿ ಹಾಕಿದೆ. ಸಿಬಿಐ ಹೊಸ ಚಾರ್ಜ್ ಶೀಟ್ ನಲ್ಲಿ ಆಂಧ್ರದ ಕೈಗಾರಿಕಾ ಮಂತ್ರಿ ಜೆ ಗೀತಾ ರೆಡ್ಡಿ ಹೆಸರು ಸೇರ್ಪಡೆಗೊಂಡಿದೆ. ಆದರೆ, ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ.

10 ಚಾರ್ಚ್ ಶೀಟ್
ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ ಕಳೆದ ವರ್ಷ ಮೇ 27ರಂದು ಬಂಧನಕ್ಕೊಳಗಾಗಿ ಚಂಚಲಗುಡ ಜೈಲು ಸೇರಿದ್ದ ಜಗನ್ ಮೋಹನ್ ರೆಡ್ಡಿ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ.
ಜಗನ್ ವಿರುದ್ಧ ಸಿಬಿಐ ತಂಡ ಸುಮಾರು 10 ಚಾರ್ಚ್ ಶೀಟ್ ಸಲ್ಲಿಸಿತ್ತು. ಪ್ರತಿ ಬಾರಿ ಜಾಮೀನು ಅರ್ಜಿ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗಲೂ ಹೊಸ ಹೊಸ ಚಾರ್ಚ್ ಶೀಟ್ ಸಲ್ಲಿಸಲಾಗುತ್ತಿತ್ತು. ಹೀಗಾಗಿ ಪ್ರಕರಣ ತೀರ್ಪು ನೀಡಿಕೆ ವಿಳಂಬಗೊಂಡಿತ್ತು.

ನಿರೀಕ್ಷೆಯಿತ್ತು
ನ್ಯಾಯಾಂಗ ಬಂಧನ ಸೆ.20ರ ತನಕ ಇತ್ತು ನಂತರ ಆಕ್ಟೋಬರ್ 3 ರ ತನಕ ಬಂಧನ ಅವಧಿ ವಿಸ್ತರಿಸಲಾಗಿತ್ತು.
ಆದರೆ, ಸಿಬಿಐ ಕೋರ್ಟ್ ಬುಧವಾರ (ಸೆ.23) ಜಾಮೀನು ಅರ್ಜಿ ತೀರ್ಪು ಪ್ರಕಟಿಸಲಿದೆ. ಜಗನ್ ಹೊರ ಬರಲಿದ್ದಾರೆ ಎಂಬ ನಿರೀಕ್ಷೆಯಿತ್ತು.
ಸಿಬಿಐ ಮತ್ತೆ ಮತ್ತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಮೂಲಕ ಪ್ರಕರಣವನ್ನು ವಿಳಂಬಗೊಳಿಸಿದೆ ಎಂದು ಜಗನ್ ಅವರ ಸೋದರಿ ಶರ್ಮಿಳಾ ಹೇಳಿದ್ದಾರೆ. ಇತ್ತೀಚೆಗೆ ಚಂಚಲಗುಡ ಜೈಲಿಗೆ ಭೇಟಿ ಕೊಟ್ಟು ಮಹತ್ವದ ಮಾತುಕತೆ ನಡೆಸಿದರು.ಮಾಧ್ಯಮಗಳಲ್ಲಿ ಜೈಲಿನಲ್ಲಿ ಇದೇ ಕೊನೆ ಭೇಟಿ ಎಂದು ವರದಿಯಾಗಿತ್ತು.

ಆಂಧ್ರಕ್ಕಾಗಿ ಜಗನ್
ಆಂಧ್ರಪ್ರದೇಶದ ಅಳಿವು ಉಳಿವಿನ ಹೋರಾಟ ನಡೆಯುತ್ತಿದ್ದು ರಾಜಕೀಯ ಮುಖಂಡನಾಗಿ ನಾನು ಹೋರಾಟದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಜಗನ್ ಅರ್ಜಿ ಹಾಕಿದ್ದರು. ಇದಕ್ಕೆ ಪೂರಕವಾಗಿ ಸಮೈಕ್ಯ ಆಂಧ್ರ ಕ್ಕಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಇದನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜೈಲಿನಿಂದ ಹೊರಕ್ಕೆ ಯಾವಾಗ?
ಸಿಬಿಐ ವಿಶೇಷ ನ್ಯಾಯಾಲಯ 2 ಲಕ್ಷ ವೈಯಕ್ತಿಕ ಬಾಂಡ್, ಹೈದರಾಬಾದ್ ಬಿಟ್ಟು ತೆರಳದಂತೆ ಕಟ್ಟಾಜ್ಞೆ ಹಾಗೂ ಇಬ್ಬರ ಶ್ಯೂರಿಟಿ ನೀಡಿ ಜಗನ್ ಗೆ ಜಾಮೀನು ಮಂಜೂರು ಮಾಡಿದರು. ಕೋರ್ಟ್ ವಿಧಿ ವಿಧಾನಗಳಂತೆ ಚಂಚಲಗುಡ ಜೈಲಿನಲ್ಲಿರುವ ವೈಎಸ್ಸಾರ್ ಪಕ್ಷದ ಮುಖಂಡ ಜಗನ್ ಅವರನ್ನು ಬಂಧಮುಕ್ತಗೊಳಿಸಲು ಕನಿಷ್ಥ 4-6 ಗಂಟೆ ತಗುಲುತ್ತದೆ.
ಅಭಿಮಾನಿಗಳ ಹರ್ಷೋದ್ಗಾರ ಈಗಾಗಲೇ ಮುಗಿಲು ಮುಟ್ಟಿದ್ದು, ಸುರಕ್ಷತಾ ದೃಷ್ಟಿಯಿಂದ ನಾಳೆ ಮುಂಜಾನೆ ಅಥವಾ ಮಧ್ಯಾಹ್ನದ ವೇಳೆಗೆ ಜಗನ್ ಅವರು ಚಂಚಲಗುಡ ಜೈಲಿನಿಂದ ಹೊರಬೀಳುವ ಸಾಧ್ಯತೆಯಿದೆ. ಚಿತ್ರದಲ್ಲಿ : ಜಗನ್ ತಾಯಿ ವೈಎಸ್ ವಿಜಯಮ್ಮ ಹಾಗೂ ಪತ್ನಿ ಭಾರತಿ

ಜಗನ್ ಸಹ ಆರೋಪಿಗಳು
ಜಗನ್ ಮೋಹನ್ ರೆಡ್ಡಿ, ಆಡಿಟರ್ ವಿ ವಿಜಯ ಸಾಯಿ ರೆಡ್ಡಿ, ಜೆ ಗೀತಾ ರೆಡ್ಡಿ, ಮಾಜಿ ಸಚಿವ ಧರ್ಮನ ಪ್ರಸಾದ್ ರಾವ್, ಐಎಎಸ್ ಅಧಿಕಾರಿಗಳಾದ ರತ್ನಪ್ರಭ, ಸಾಮ್ ಬಾಬ್, ಎಂ ಸ್ಯಾಮುಯಲ್, ವಜಾಗೊಂಡ ಅಧಿಕಾರಿ ಬಿಪಿ ಆಚಾರ್ಯ, ಇಂದು ಸಮೂಹದ ಶ್ಯಾಮ್ ಪ್ರಸಾದ್ ರೆಡ್ಡಿ ಹೆಸರು ಚಾರ್ಜ್ ಶೀಟ್ ನಲ್ಲಿದೆ. ಮುಂದುವರೆದು...

ಇವರಿಗೂ ಸಂಕಟ
ಚಾರ್ಜ್ ಶೀಟ್ ನಲ್ಲಿ ಹೆಸರು ಕಾಣಿಸಿಕೊಂಡ ಮೇಲೆ ಆಂಧ್ರದ ಗೃಹಸಚಿವ ಸ್ಥಾನಕ್ಕೆ ಸಬಿತಾ ರೆಡ್ಡಿ ಹಾಗೂ ರಸ್ತೆ ಸಚಿವ ಸ್ಥಾನಕ್ಕೆ ಪ್ರಸಾದ್ ರಾವ್ ರಾಜೀನಾಮೆ ನೀಡಿದ್ದಾರೆ. ಪೆನ್ನಾ ಸಿಮೆಂಟ್ಸ್, ರಘುರಾಮ್(ಭಾರತಿ) ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಮೇಲೆ ಚಾರ್ಚ್ ಶೀಟ್ ಹಾಕಿರುವುದರಿಂದ ಬಿಸಿಸಿಐ ಅಧ್ಯಕ್ಷ ಹಾಗೂ ಸಿಮೆಂಟ್ ಕಂಪನಿಗಳ ಒಡೆಯ ಎನ್ ಶ್ರೀನಿವಾಸನ್ ಕೂಡಾ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ವೈಎಸ್ಸಾರ್ ಪಕ್ಷದ ಹರ್ಷ
ಕಾಂಗ್ರೆಸ್ ನವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು. ತೆಲಂಗಾಣದಿಂದ ಸಿಗುವ 17 ಸೀಟುಗಳನ್ನು ಪಡೆದು ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಸೋನಿಯಾ ಗಾಂಧಿ ಹೊರಟ್ಟಿದ್ದಾರೆ.
ರಾಜಕೀಯ ದುರುದ್ದೇಶದಿಂದ ರಾಜ್ಯ ಒಡೆಯುವ ಜನ ವೈಎಸ್ ಜಗನ್ ಅವರ ಜನಪ್ರಿಯತೆ ಕುಗ್ಗಿಸಲು ಅನೇಕ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ರಾಯಲಸೀಮೆ ಅಷ್ಟೇ ಅಲ್ಲ ಅಖಂಡ ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವೈಎಸ್ ಶರ್ಮಿಳಾ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications