ನನ್ನ ಜಮೀನು ಉಳಿಸಿಕೊಡಿ: ವಿಡಿಯೋದಲ್ಲಿ ಯೋಧನ ಅಹವಾಲು
ಚಿತ್ತೂರು, ಆಗಸ್ಟ್ 22: ಒತ್ತುವರಿಯಿಂದ ತಮ್ಮ ಜಮೀನನ್ನು ಉಳಿಸಿಕೊಡುವಂತೆ ಮತ್ತು ತಮ್ಮ ತಾಯಿಗೆ ಸಹಾಯ ಮಾಡುವಂತೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎಲ್ಲಪಳ್ಳಿ ಗ್ರಾಮದ ಸೇನಾ ಯೋಧರೊಬ್ಬರು ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ವಿಡಿಯೋದಲ್ಲಿ ಅಹವಾಲು ಸಲ್ಲಿಸಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಟಿ. ಚಂದ್ರಬಾಬು ಅವರು ಸೋಮವಾರ ಸಂಬಂಧಿಕರು ಮತ್ತು ಗ್ರಾಮಸ್ಥರಿಗೆ ವಾಟ್ಸಾಪ್ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ಅಂತಹ ಯಾವುದೇ ರೀತಿಯ ಜಮೀನು ಒತ್ತುವರಿ ನಡೆದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಆರೋಪವನ್ನು ಅಲ್ಲಗಳೆದಿದ್ದಾರೆ.
'ನಾನು, ಚಂದ್ರಬಾಬು ಮತ್ತು ನನ್ನ ಸಹೋದರ ದೇವೇಂದರ್ ಇಬ್ಬರೂ ಗಂಗಾಧರ ನೆಲ್ಲೋರ್ ಮಂಡಲದ ಎಲ್ಲಪಳ್ಳಿ ಗ್ರಾಮದವರು. ಇಬ್ಬರೂ ಭಾರತೀಯ ಸೇನೆಯಲ್ಲಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಸೋಹನ್ ಬಾಬು ಮತ್ತು ಸಾಂಬಶಿವ ರಾವ್ ಎಂಬ ಇಬ್ಬರು ವ್ಯಕ್ತಿಗಳು ನಮಗೆ ಸೇರಿದ ಜಮೀನಿನಲ್ಲಿ ಮೂರು ಎಕರೆ 60 ಗುಂಟೆ ಜಾಗವನ್ನು ಕಬಳಿಸಿದ್ದಾರೆ' ಎಂದು ಚಂದ್ರಬಾಬು ಆರೋಪಿಸಿದ್ದಾರೆ.

'ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಮ್ಮ ಜಮೀನನ್ನು ಕಬಳಿಸಿದ್ದಾರೆ. ಈ ಬಗ್ಗೆ ಮಾತನಾಡಿದರೆ ಕೊಲೆ ಮಾಡುವುದಾಗಿ ನಮ್ಮ ತಾಯಿಗೆ ಬೆದರಿಕೆ ಹಾಕಿದ್ದಾರೆ. ನಮಗೆ ರಜೆಗಳು ಇಲ್ಲದ ಕಾರಣ ನಾವು ಅಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮದ ಅಧಿಕಾರಿಗಳು ಮತ್ತು ಯುವಕರು ನಮ್ಮ ತಾಯಿಯನ್ನು ರಕ್ಷಿಸಬೇಕು. ದಯವಿಟ್ಟು ನಮಗೆ ರಕ್ಷಣೆ ನೀಡಿ. ಈ ವಿಡಿಯೋ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ತಲುಪುವವರೆಗೂ ಶೇರ್ ಮಾಡಿ' ಎಂದು ಕೋರಿದ್ದಾರೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಗ್ರಾಮದ ಆಡಳಿತ ಈ ಬಗ್ಗೆ ಪರಿಶೀಲನೆ ನಡೆಸಿದೆ. ಮಂಡಲ ಕಂದಾಯ ಅಧಿಕಾರಿ ಭವಾನಿ ಅವರು, ಭೂಕಬಳಿಕೆಯ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
'ಚಂದ್ರಬಾಬುವಿನ ತಾಯಿ ಮತ್ತು ಆತನ ಅಣ್ಣನ ಪತ್ನಿ ಬಳಿ ಅವರಿಗೆ ಹಂಚಿಕೆ ಮಾಡಿರುವ ಐದು ಗುಂಟೆ ಜಾಗವಿದೆ. ಈ ಭೂಮಿ ಕುಟುಂಬದ ವಶದಲ್ಲಿಯೇ ಇದೆ. ಅವರು ಹೇಳುವ ಪ್ರದೇಶದಲ್ಲಿ ಈ ಸಹೋದರರಿಗೆ ಯಾವುದೇ ಭೂಮಿ ಹಂಚಿಕೆ ಮಾಡಿಲ್ಲ. ಚಂದ್ರಬಾಬು ಅವರು ಆರೋಪ ಮಾಡಿರುವ ವ್ಯಕ್ತಿಗಳು ಅವರ ಕುಟುಂಬದವರೇ ಆಗಿದ್ದಾರೆ. ಈ ಕುಟುಂಬಗಳ ನಡುವೆ ಕೆಲವು ವಿವಾದಗಳು, ಜಗಳಗಳಿವೆ. ಆದರೆ, ಭೂಕಬಳಿಕೆಯ ಘಟನೆ ನಡೆದಿಲ್ಲ' ಎಂದು ಅವರು ತಿಳಿಸಿದ್ದಾರೆ.
ಸೈನಿಕರ ಕುಟುಂಬದವರು ತಮ್ಮ ಮನೆ ಬಳಿ ರಸ್ತೆ ಬೇಕೆಂದು ಬಯಸಿದ್ದಾರೆ. ಈಗಾಗಲೇ ಅವರ ಮನೆ ಮುಂಭಾಗಕ್ಕೆ ರಸ್ತೆ ಇದೆ. ಆದರೂ ಮನೆಯ ಹಿಂಭಾಗಕ್ಕೂ ರಸ್ತೆ ಬೇಕೆಂದು ಕೇಳುತ್ತಿದ್ದಾರೆ. ಈ ಪ್ರದೇಶವನ್ನು ಸಮೀಕ್ಷೆ ಮಾಡಲಾಗಿದೆ. ಮನೆಗಳ ಸಾಲಿನ ಹಿಂದೆ 13 ಅಡಿ ರಸ್ತೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.











Click it and Unblock the Notifications