ವಿದೇಶದಿಂದ ಬಂದವರಿಗೆ ಕೊರೊನಾ ಸೋಂಕು; ತೆಲಂಗಾಣದಲ್ಲಿ ಆತಂಕ
ತೆಲಂಗಾಣ, ಮೇ 30 : ವಿದೇಶದಿಂದ ವಾಪಸ್ ಆದ 64 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ತೆಲಂಗಾಣದ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,425.
ತೆಲಂಗಾಣ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 169 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿತ್ತು. ಇದುವರೆಗೂ ಒಂದೇ ದಿನದಲ್ಲಿ ದಾಖಲಾದ ಹೆಚ್ಚು ಪ್ರಕರಣ ಇದಾಗಿದೆ.
100 ಜನ ಸ್ಥಳೀಯರು, 64 ಜನ ವಿದೇಶದಿಂದ ಆಗಮಿಸಿದವರು, 5 ಜನ ವಲಸೆ ಕಾರ್ಮಿಕರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಹೈದರಾಬಾದ್ ನಗರವೊಂದರಲ್ಲಿಯೇ 82 ಪ್ರಕರಣ ದಾಖಲಾಗಿದೆ.

ತೆಲಂಗಾಣ ಸರ್ಕಾರ ಕಳೆದ ಒಂದು ವಾರದಿಂದ ಕೋವಿಡ್ - 19 ಸಂಖ್ಯೆಗಳನ್ನು ನೀಡುವ ಮಾದರಿಯಲ್ಲಿ ಬದಲಾವಣೆ ಮಾಡಿದೆ. ಈಗ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಮಾತ್ರ ನೀಡಲಾಗುತ್ತಿದೆ.
ಇದುವರೆಗೂ ರಾಜ್ಯದಲ್ಲಿ 2008 ಸ್ಥಳೀಯರು, 417 ವಲಸೆ ಕಾರ್ಮಿಕರು ಮತ್ತು ವಿದೇಶದಿಂದ ವಾಪಸ್ ಆದವರಿಗೆ ಸೋಂಕು ತಗುಲಿದೆ. ಇದುವರೆಗೂ ರಾಜ್ಯದಲ್ಲಿ 1,381 ಜನರು ಕೋವಿಡ್ - 19 ಸೋಂಕಿನಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 71. ಹೈದರಾಬಾದ್ ನಗರದಲ್ಲಿಯೇ 23 ಜನರು ಮೃತಪಟ್ಟಿದ್ದಾರೆ. ಮೇ 31ರ ತನಕ ರಾಜ್ಯದಲ್ಲಿ 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ, ಲಾಕ್ ಡೌನ್ ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ.












Click it and Unblock the Notifications