ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಜನವರಿಯಲ್ಲಿ ಉದ್ಘಾಟನೆ
ಹುಬ್ಬಳ್ಳಿ ಡಿಸೆಂಬರ್ 12: ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ಶ್ರೀ ಸಿದ್ದಾರೂಢ ಸ್ವಾಮಿ (ಎಸ್‌ಎಸ್‌ಎಸ್) ರೈಲ್ವೆ ಪ್ಲಾಟ್‌ಫಾರ್ಮ್ ಜನವರಿ 2023 ವೇಳೆಗೆ ಉದ್ಘಾಟನೆಗೊಳ್ಳಲಿದೆ. ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಜನವರಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಈ ವಾಣಿಜ್ಯ ನಗರಿ ರೈಲು ನಿಲ್ದಾಣ ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆಗೆ ಭಾಜನವಾಗಲಿದೆ. ಅವಳಿ ನಗರ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈಗಿರುವ ಪ್ಲಾಟ್ ಫಾರ್ಮ್ ನಂ1 550 ಮೀಟರ್ ಉದ್ದವಿದ್ದು, ಅದನ್ನು 1,400 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದನ್ನು ಹತ್ತು ಮೀಟರ್ ಅಗಲ ಮಾಡಲಾಗಿದೆ. ಈಗಿನ ತಪಾಸಣಾ ಕ್ಯಾರೇಜ್ ಮಾರ್ಗವನ್ನು ಪೂರ್ಣ ಪ್ಲಾಟ್ ಫಾರ್ಮ್ ಆಗಿ ಪರಿವರ್ತಿಸಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ.
ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 1,366 ಮೀಟರ್ ಉದ್ದದ ಪ್ಲಾಟ್ ಫಾರ್ಮ್ ಇದೆ. ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಎನ್ನುವ ಹೆಗ್ಗಳಿಕೆ ಹೊಂದಿದೆ. ಇದನ್ನೂ ಮೀರಿಸುವ ಉದ್ದನೆಯ ಪ್ಲಾಟ್‌ಫಾರ್ಮ್ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿದೆ. ಹುಬ್ಬಳ್ಳಿ ನಿಲ್ದಾಣದಲ್ಲಿ ಒಟ್ಟು ಪ್ಲಾಟ್‌ಫಾರ್ಮ್‌ಗಳ ಸಂಖ್ಯೆಯನ್ನು 5ರಿಂದ 8ಕ್ಕೆ ಹೆಚ್ಚಿಸಲಾಗುತ್ತಿದೆ.

ಗದಗ ರಸ್ತೆಯಲ್ಲಿ ಹೊಸದಾಗಿ ಇನ್ನೊಂದು ಪ್ರವೇಶ ದ್ವಾರ ನಿರ್ಮಾಣಗೊಂಡಿದೆ. ಪ್ಲಾಟ್ ಫಾರ್ಮ್ ನಿರ್ಮಾಣ, ಸಿಗ್ನಲ್, ವಿದ್ಯುತ್ ಸೇರಿದಂತೆ ಈ ಯೋಜನೆಗೆ ಒಟ್ಟು ₹90 ಕೋಟಿಗೂ ಹೆಚ್ಚು ವೆಚ್ಚವಾಗಿದೆ. ಈ ರೀತಿ ಉದ್ದನೆಯ ರೈಲು ನಿಲ್ದಾಣದಿಂದ ವಾಣಿಜ್ಯ ನಗರಿಗೆ ಮತ್ತೊಂದು ಗರಿ ಬಂದಂತಾಗಿದೆ.












Click it and Unblock the Notifications