ಹುಬ್ಬಳ್ಳಿ-ಧಾರವಾಡ-ಬೆಳಗಾವಿ ನಡುವೆ ಓಡಲಿದೆ ವಂದೇ ಮೆಟ್ರೋ ರೈಲು?
ವಂದೇ ಮೆಟ್ರೋ ರೈಲು ಉತ್ತರ ಕರ್ನಾಟಕದ ಎರಡು ಪ್ರಮುಖ ನಗರಗಳಾದ ಹುಬ್ಬಳ್ಳಿ-ಬೆಳಗಾವಿಯನ್ನು ಸಂಪರ್ಕಿಸುವ ಸಾಧ್ಯತೆ ಇದೆ. ಈಗಾಗಲೇ ಭಾರತೀಯ ರೈಲ್ವೆ ವಂದೇ ಮೆಟ್ರೋ ಪರಿಕಲ್ಪನೆ ಜಾರಿಗೆ ಕೆಲಸ ಮಾಡುತ್ತಿದೆ.
ಹುಬ್ಬಳ್ಳಿ, ಫೆಬ್ರವರಿ 13; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಯಶಸ್ವಿಯಾಗಿದೆ. ದೇಶದಲ್ಲಿ ಈ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ಈಗ ವಂದೇ ಮೆಟ್ರೋ ರೈಲು ಸೇವೆ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಈಗ ಭಾರತೀಯ ರೈಲ್ವೆ 'ವಂದೇ ಮೆಟ್ರೋ' ರೈಲು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಎರಡು ನಗರಗಳ ನಡುವೆ ಸಂಚಾರ ನಡೆಸುವ ಉತ್ತಮ ದರ್ಜೆಯ ಪ್ರಾದೇಶಿಕ ರೈಲು ಸೇವೆಯೇ ವಂದೇ ಮೆಟ್ರೋ.
ಪ್ರಧಾನಿ ನರೇಂದ್ರ ಮೋದಿ ಇಂತಹ ಯೋಜನೆ ಜಾರಿಗೊಳಿಸುವಂತೆ ರೈಲ್ವೆ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಡಿಸೆಂಬರ್ ವೇಳೆಗೆ ಇಂತಹ ಪರಿಕಲ್ಪನೆ ಜಾರಿಗೆ ಬರುವ ನಿರೀಕ್ಷೆ ಇದೆ.
ದೇಶದಲ್ಲಿಯೇ ಇಂತಹ ಮೊದಲ ರೈಲು ಬೆಂಗಳೂರು ನಗರದಿಂದ ಸಂಚಾರ ಆರಂಭಿಸಲಿದೆ ಎಂಬುದು ಸದ್ಯದ ಸುದ್ದಿ. ಉತ್ತರ ಕರ್ನಾಟಕ ಭಾಗಕ್ಕೆ ವಂದೇ ಮೆಟ್ರೋ ರೈಲು ಸಹ ಲಭ್ಯವಾಗಲಿದೆ. ಈ ಮಾದರಿ ರೈಲು ಹುಬ್ಬಳ್ಳಿ-ಬೆಳಗಾವಿ ನಡುವೆ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

8 ಕೋಚ್‌ಗಳ ಚಿಕ್ಕ ರೈಲು ಇದು
16 ಕೋಚ್‌ಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈಗ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ವಂದೇ ಮೆಟ್ರೋ ಕೇವಲ 8 ಬೋಗಿ ಹೊಂದಿರುತ್ತದೆ. ಎರಡು ದೊಡ್ಡ ನಗರಗಳನ್ನು ಸಂಪರ್ಕಿಸಲು ಈ ಮಾದರಿ ರೈಲನ್ನು ಪರಿಚಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲವಾಗುವ ಮಾದರಿ ರೈಲು ಇದಾಗಿದೆ.
100 ಕಿ. ಮೀ. ವ್ಯಾಪ್ತಿಯ ಎರಡು ನಗರಗಳ ನಡುವೆ ಪ್ರತಿನಿತ್ಯ ಸಂಚಾರ ನಡೆಸುವ ಜನರಿಗೆ ಉತ್ತಮ ಗುಣಮಟ್ಟದ ಪ್ರಯಾಣ ಸೇವೆ ಒದಗಿಸುವ ಪರಿಕಲ್ಪನೆಯಲ್ಲಿ ವಂದೇ ಮೆಟ್ರೋ ರೈಲನ್ನು ಓಡಿಸಲಾಗುತ್ತಿದೆ.

ಉತ್ಪಾದನಾ ವೆಚ್ಚವೂ ಕಡಿಮೆ
ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ತಯಾರು ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ವಂದೇ ಮೆಟ್ರೋ ರೈಲು ತಯಾರು ಮಾಡುವ ಕುರಿತು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಅಲ್ಲದೇ ಲಕ್ನೋದಲ್ಲಿರುವ ರೈಲು ಬೋಗಿ ತಯಾರಿಕಾ ಫ್ಯಾಕ್ಟರಿಗೆ ಸಹ ಈ ಮಾದರಿ ರೈಲು ಬೋಗಿ ಸುರಕ್ಷತಾ ಕ್ರಮಗಳ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹೋಲಿಕೆ ಮಾಡಿದರೆ ವಂದೇ ಮೆಟ್ರೋ ರೈಲು ತಯಾರಿಕಾ ವೆಚ್ಚ ಕಡಿಮೆ ಎಂದು ಅಂದಾಜಿಸಲಾಗಿದೆ. 2023ರ ಡಿಸೆಂಬರ್ ವೇಳೆಗೆ ಇಂತಹ ರೈಲು ಹಳಿಯ ಮೇಲೆ ಓಡುವ ನಿರೀಕ್ಷೆ ಇದೆ.

ಹುಬ್ಬಳ್ಳಿ-ಬೆಳಗಾವಿ ನಡುವೆ ಸಂಚಾರ?
ಉತ್ತರ ಕರ್ನಾಟಕ ಭಾಗದ ಎರಡು ಪ್ರಮುಖ ನಗರಗಳು ಹುಬ್ಬಳ್ಳಿ-ಬೆಳಗಾವಿ. ಎರಡು ನಗರಗಳ ನಡುವೆ ವಂದೇ ಮೆಟ್ರೋ ರೈಲು ಸಂಚಾರ ಆರಂಭಿಸಿದರೆ ಅನುಕೂಲವಾಗಲಿದೆ ಎಂಬ ಚಿಂತನೆ ಇದೆ. ಹುಬ್ಬಳ್ಳಿ-ಧಾರವಾಡ-ಬೆಳಗಾವಿ ನಡುವಿನ ಅಂತರ 140 ಕಿ. ಮೀ.ಯಾಗಿದೆ.
ಒಂದು ವೇಳೆ ವಂದೇ ಮೆಟ್ರೋ ರೈಲು ಸೇವೆ ಆರಂಭ ಮಾಡಿದರೆ ಪ್ರತಿದಿನ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ. ಭವಿಷ್ಯದಲ್ಲಿ ಬೆಳಗಾವಿ-ಮೀರಜ್ ನಡುವೆ ಸಹ ಇಂತಹ ಮಾದರಿ ರೈಲು ಸಂಚಾರ ಆರಂಭಿಸಬಹುದು ಎಂಬುದು ರೈಲ್ವೆ ಇಲಾಖೆಯ ಚಿಂತನೆ.

ನೇರ ರೈಲು ಮಾರ್ಗ, ವಿದ್ಯುದೀಕರಣ
ರಾಜಧಾನಿ ಬೆಂಗಳೂರು ಮೂಲಕ ವಂದೇ ಭಾರತ್ ರೈಲು ಹುಬ್ಬಳ್ಳಿ-ಧಾರವಾಡಕ್ಕೆ ಸಂಚಾರ ನಡೆಸಲಿದೆ. ಇದಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಏಪ್ರಿಲ್ ವೇಳೆಗೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗದ ಕಾಮಗಾರಿಯೂ ನಡೆಯುತ್ತಿದೆ.
ಹುಬ್ಬಳ್ಳಿ-ಧಾರವಾಡ ಮೂಲಕ ಬೆಳಗಾವಿಗೆ ವಂದೇ ಮೆಟ್ರೋ ಸಂಚಾರ ಆರಂಭಿಸಿದರೆ ರಾಜಧಾನಿ, ಗಡಿ ಭಾಗದ ಬೆಳಗಾವಿ ಸಂಪರ್ಕ ಸುಲಭವಾಗಲಿದೆ. ಜನರು ಬಸ್ ಮೂಲಕ ತಾಸುಗಟ್ಟಲೇ ಪ್ರಯಾಣಿಸುವುದು, ದುಬಾರಿ ದರ ನೀಡಿ ವಿಮಾನದಲ್ಲಿ ಸಂಚಾರ ನಡೆಸುವುದು ತಪ್ಪಲಿದೆ.











Click it and Unblock the Notifications