ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ ಕುಟುಂಬಕ್ಕೆ ನೆರವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ, ಅಕ್ಟೋಬರ್ 26: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಮನೆಗೆ ನುಗ್ಗಿ ಹತ್ಯೆ ಮಾಡಿದ ಪ್ರಕರಣ ಸಂಪೂರ್ಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಹಿಂದೆ ಅಂಜಲಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಮಾಡುತ್ತೇವೆ ಎಂದು ಒಪ್ಪಲಾಗಿತ್ತು. ಅದರಂತೆ ಈಗ ಕೊಟ್ಟ ಮಾತಿನಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜಲಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡಿದರು.
ಮೇ 15 ರಂದು ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ ಎಂಬ ಯುವತಿಯನ್ನು ವಿಶ್ವ ಅಲಿಯಾಸ ಗಿರೀಶ್ ಎಂಬ ಯುವಕ ಬೆಳ್ಳಂ ಬೆಳಗ್ಗೆ ಅಂಜಲಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಪೊಲೀಸರು ಆತನನ್ನು ಅರೆಸ್ಟ್ ಮಾಡಿ ತನಿಖೆ ಮಾಡಿದಾಗ ಪ್ರೀತಿ ನಿರಾಕರಿಸಿದಕ್ಕೆ ಅಂಜಲಿಯನ್ನು ಕೊಲೆ ಮಾಡಿ ವಿಚಾರ ಬೆಳಕಿಗೆ ಬಂದಿತ್ತು.

ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆಯಾದ ಒಂದೇ ತಿಂಗಳಲ್ಲಿ ಅಂಜಲಿ ಕೊಲೆಯಾಗಿತ್ತು. ಇವೆರೆಡು ಘಟನೆ ಹುಬ್ಬಳ್ಳಿಯಲ್ಲಿ ಭಯದ ವಾತಾವರಣ ಮೂಡಿಸಿದ್ದವು. ಕುಟುಂಬಕ್ಕೆ ಆಸರೆಯಾಗಿದ್ದ ಅಂಜಲಿ ಕೊಲೆಯಾದಳು, ಮನೆಗೆ ಯಾರು ದಿಕ್ಕವಿಲ್ಲದಂತಾಯಿತು. ಅಂಬಿಗ ಸಮುದಾಯ ಈ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯ ಮಾಡಲಾಗಿತ್ತು.

ಅದೇ ರೀತಿ ಅಂಜಲಿ ಮನೆಗೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭೇಟಿ ಸಾಂತ್ವನ ಕೂಡ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ತಹಶೀಲ್ದಾರ್ ಕಲ್ಲಗೌಡ ಪಾಟೀಲ್ ಅವರು ಅಂಜಲಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಕಷ್ಟದಲ್ಲಿದ್ದ ಅಂಜಲಿ ಕುಟುಂಬಕ್ಕೆ ರಾಜ್ಯ ಸರ್ಕಾರದ ಸಹಾಯದಿಂದ ನೆರವು ಸಿಕ್ಕಂತಾಗಿದೆ.












Click it and Unblock the Notifications