ಆದಾಯ ಸಂಗ್ರಹದಲ್ಲಿ ನೈಋತ್ಯ ರೈಲ್ವೆ ಹೊಸ ದಾಖಲೆ ನಿರ್ಮಾಣ, ಸಂಪೂರ್ಣ ವಿವರ ಇಲ್ಲಿದೆ
ಹುಬ್ಬಳ್ಳಿ, ಡಿಸೆಂಬರ್, 05: ವಿಶೇಷ ಯೋಜನೆಗಳ ಮೂಲಕ ಜನಮನ್ನಣೆ ಪಡೆದ ನೈಋತ್ಯ ರೈಲ್ವೆಯೂ ಮತ್ತೊಂದು ಸಾಧನೆ ಮಾಡಿದೆ. ನೈಋತ್ಯ ರೈಲ್ವೆ ಇದೀಗ ತನ್ನ ಆದಾಯದಲ್ಲಿಯೂ ದಾಖಲೆ ನಿರ್ಮಿಸಿದೆ. ನೈಋತ್ಯ ರೈಲ್ವೆ ವಲಯವು ಪ್ರಸ್ತುತ ಆರ್ಥಿಕ ವರ್ಷದ ನವೆಂಬರ್ ತಿಂಗಳವರೆಗೆ 4,447.67 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ 3,400.83 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಆದಾಯದಲ್ಲಿ ಶೇಕಡಾ 30.78ರಷ್ಟು ಹೆಚ್ಚಳ ಕಂಡಿದೆ. ಅಲ್ಲದೇ ಪ್ರಯಾಣಿಕರಿಗೆ ವಿಶೇಷ ಯೋಜನೆ ರೂಪಿಸುವ ಮೂಲಕ ಮಹಾರಿ ಕೊರೊನಾ ಬಳಿಕ ಆದಾಯ ಸಂಗ್ರಹದಲ್ಲಿ ದಾಖಲೆ ನಿರ್ಮಿಸಿದೆ.
ಈ ವರ್ಷದ 2022 ನವೆಂಬರ್‌ವರೆಗೆ ಅತಿ ಹೆಚ್ಚು ಪ್ರಯಾಣಿಕರ ಸಂಚಾರದಿಂದ 1,813.58 ಕೋಟಿ ರೂಪಾಯಿ ಆದಾಯ ಗಳಿಕೆ ಆಗಿರುವ ಮಾಹಿತಿ ಹೊರಬಿದ್ದಿದೆ. ಕಳೆದ ವರ್ಷ 927.31 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ ಶೇಕಡಾ 95.57ರಷ್ಟು ಹೆಚ್ಚಿನ ಆದಾಯ ಪ್ರಯಾಣಿಕರ ಸಂಚಾರದಿಂದ ಬಂದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಟಿಕೆಟ್ ಪರಿಶೀಲನೆಯಿಂದ ಕಳೆದ ಬಾರಿ 15.72 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿತ್ತು. ಆದರೆ ಈ ಬಾರಿ 37.74 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿಯೂ ಶೇಕಡಾ 104.08ರಷ್ಟು ಹೆಚ್ಚಳವಾಗಿದ್ದು, ಸರಕು ಸಾಗಣೆಯಿಂದ ಬರುವ ಆದಾಯ ಶೇಕಡಾ 16.32ರಷ್ಟು ಹೆಚ್ಚಳವಾಗಿದೆ.

93.29 ಕೋಟಿ ರೂ. ಆದಾಯ ಸಂಗ್ರಹ
ಸರಕು ಸಾಗಣೆಯಿಂದ ಕಳೆದ ವರ್ಷ 80.20 ಕೋಟಿ ರೂಪಾಯಿ ಆದಾಯ ಸಂಗ್ರಹಣೆ ಆಗಿತ್ತು. ಆದರೆ ಈ ಬಾರಿ 93.29 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ರೈಲ್ವೆ ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ನೈಋತ್ಯ ವಲಯ ಉತ್ತಮ ಆದಾಯ ಗಳಿಸಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕುಮಾರ ತಿಳಿಸಿದ್ದಾರೆ.

ಪ್ಯಾಸೆಂಜರ್ ರೈಲು ಸಂಚಾರದಿಂದ ಲಾಭ
ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ ಈ ಹಿಂದೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ದಾಖಲೆಯ ಮಟ್ಟದಲ್ಲಿ ಆದಾಯವನ್ನು ಗಳಿಸಿತ್ತು. ಕೇವಲ ಪ್ಯಾಸೆಂಜರ್ ರೈಲು ಸಂಚಾರದಿಂದ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿ ನೂತನ ದಾಖಲೆಯನ್ನು ನಿರ್ಮಿಸಿತ್ತು. ಈ ವರ್ಷದ ಏಪ್ರಿಲ್‍ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಪ್ಯಾಸೆಂಜರ್ ರೈಲು ಸಂಚಾರದಿಂದ ರೈಲ್ವೆಗೆ 1,048 ಕೋಟಿ ರೂಪಾಯಿ ಲಾಭವಾಗಿತ್ತು. ಕಳೆದ ವರ್ಷ ಏಪ್ರಿಲ್‍ನಿಂದ ಆಗಸ್ಟ್‌ವರೆಗೆ ಬರೀ 450 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಬಂದ್ ಮಾಡಲಾಗಿತ್ತು. ಇದು ಇಲಾಖೆಗೆ ಸಾಕಷ್ಟು ಹೊಡೆತ ನೀಡಿತ್ತು. ನಂತರ ಆಡಳಿತ ವಿಭಾಗ ಹಲವಾರು ಮಾರ್ಗಗಳನ್ನು ಕಂಡುಕೊಂಡ ಪರಿಣಾಮ ಆದಾಯ ಸಂಗ್ರಹದಲ್ಲಿ ದಾಖಲೆ ನಿರ್ಮಿಸಿತ್ತು.

ಮುಂಬೈ- ಮಂಗಳೂರು ನಡುವೆ ವಿಶೇಷ ರೈಲು
ಕೊಂಕಣ ರೈಲ್ವೆಯ ಇತ್ತೀಚಿನ ಅಧಿಸೂಚನೆಯ ಪ್ರಕಾರ ವಿಶೇಷ ರೈಲುಗಳು ಶುಕ್ರವಾರದಿಂದ (ಡಿಸೆಂಬರ್ 09) ಪ್ರಾರಂಭವಾಗುತ್ತವೆ. ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಕೊಂಕಣ ರೈಲ್ವೆಯು ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಚಳಿಗಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಈ ನಿರ್ಧಾರವನ್ನು ಕೈಗೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಯಾವ್ಯಾವ ಮಾರ್ಗಗಳಲ್ಲಿ ರೈಲು ಸಂಚಾರ?
ರೈಲು ಸಂಖ್ಯೆ 01453 / 01454 ಲೋಕಮಾನ್ಯ ತಿಲಕ್ - ಮಂಗಳೂರು ಜಂಕ್ಷನ್ -ಲೋಕಮಾನ್ಯ ತಿಲಕ್ ವಿಶೇಷ ಸಾಪ್ತಾಹಿಕ ರೈಲು ಡಿಸೆಂಬರ್ 9ರಿಂದ 2023ರ ಜನವರಿ 6ರವರೆಗೆ ಸೇವೆ ಒದಗಿಸಲಿದೆ. ಪ್ರತಿ ಶುಕ್ರವಾರ ಮುಂಬೈ ಲೋಕಮಾನ್ಯ ಟರ್ಮಿನಲ್ನಿಂದ ಹೊರಡುವ ಈ ರೈಲು ಶನಿವಾರ ಸಂಜೆ 5:5 ಕ್ಕೆ ಮಂಗಳೂರನ್ನು ತಲುಪಲಿದೆ. ಎರಡನೇ ರೈಲು ಸಂಖ್ಯೆ 01453 ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಪ್ರತಿ ಶುಕ್ರವಾರ ರಾತ್ರಿ 10:15ಕ್ಕೆ ಹೊರಡಲಿದ್ದು ಮಂಗಳೂರನ್ನು ಮರುದಿನ ಸಂಜೆ 5:05ಕ್ಕೆ ತಲುಪಲಿದೆ. ಈ ರೈಲು ಡಿಸೆಂಬರ್ 9 ರಿಂದ ಜನವರಿ 6ರವರೆಗೆ ಸೇವೆ ಒದಗಿಸಲಿದೆ.
ಮೂರನೇ ರೈಲು ಸಂಖ್ಯೆ 01454 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಸಾಪ್ತಾಹಿಕ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್ 10 ರಿಂದ ಜನವರಿ 7 ರವರೆಗೆ ಪ್ರತಿ ಶನಿವಾರ ಸಂಜೆ 6.45ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 2:25ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣವನ್ನು ತಲುಪಲಿದೆ. ಈ ರೈಲುಗಳು ಒನ್ ಟು ಟಯರ್ ಎಸಿ ಕೋಚ್, ಮೂರು 3 ಟಯರ್ ಎಸಿ ಮತ್ತು 8 ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತವೆ ಎಂದು ತಿಳಿಸಿದೆ.












Click it and Unblock the Notifications