ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ
ಹುಬ್ಬಳ್ಳಿ, ಅಕ್ಟೋಬರ್, 19: ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಪಾಳಾ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ ಬೆಳಗಾವಿಯತ್ತ ಹೋಗುತ್ತಿದ್ದ ಶಿಬರ್ಡ್ ಸ್ಲೀಪರ್ ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಬಸ್ಸಿನೊಳಗಿದ್ದ ಕೆಲವು ಪ್ರಯಾಣಿಕರಿಗೆಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನುಳಿದ ಪ್ರಯಾಣಿಕರು ಆಂಬುಲೆನ್ಸಗಾಗಿ ಕಾಯುತ್ತಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ
ಇತ್ತೀಚೆಗಷ್ಟೇ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಟಿಟಿ ವಾಹನ ರಸ್ತೆ ಮಧ್ಯೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗೂಲ್ ಬಳಿ ನಡೆದಿತ್ತು.
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದ ಬಳಿಕ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆಂದು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಟಿಟಿ ವಾಹನದಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದು ಕೆಲವರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ವಾಹನ ಮೂಲತಃ ಕಾರವಾರ ಜಿಲ್ಲೆಯ ಶಿರಸಿ ಮೂಲದ್ದಾಗಿದೆ ಎಂದು ತಿಳಿದುಬಂದಿತ್ತು.
ರಸ್ತೆ ಮಧ್ಯೆ ಪಲ್ಟಿಯಾದ ಟಿಟಿ ವಾಹನ ಸುಮಾರು 50 ಅಡಿಯಷ್ಟು ದೂರ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದೆ. ವಾಹನ ಚಾಲಕ ಅತಿಯಾದ ವೇಗವಾಗಿ ಇದ್ದ ಕಾರಣದಿಂದಲೇ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಂತಹ ದುರ್ಘಟನೆ ಸಂಭವಿಸಿಲ್ಲ.
ವಾಹನ ಪಟ್ಟಿಯಾದ ಕೂಡಲೇ ಸ್ಥಳೀಯರು ಗಾಡಿಯಲ್ಲಿದ್ದವರನ್ನು ಹೊರ ತಂದು ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲವರನ್ನು ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications