ಉತ್ತರ ಕರ್ನಾಟಕದ ಕಿಮ್ಸ್ ಬಗ್ಗೆ ಗಂಭೀರ ಚರ್ಚೆ, ಮೇಜರ್ ಸರ್ಜರಿಗೆ ಮುಂದಾದ ಸರ್ಕಾರ
ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯದ ರೋಗಿಗಳು ದಾಖಲಾಗುವ ಕರ್ನಾಟಕದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಕಿಮ್ಸ್ ಆಸ್ಪತ್ರೆ ಹಾಗೂ ನಿರ್ದೇಶಕರ ಬಗ್ಗೆ ಇದೀಗ ಗಂಭೀರವಾದ ಚರ್ಚೆ ನಡೆದಿದೆ. ಕಿಮ್ಸ್ - ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ( ಕೆಎಂಸಿ&ಆರ್‌ಐ ) ಆಸ್ಪತ್ರೆಗೆ ನಿತ್ಯ ಸಾವಿರಾರು ಜನ ಬರುತ್ತಾರೆ.
ಹಲವು ಪ್ರಮುಖ ವೈದ್ಯಕೀಯ ಸೇವೆಗಳನ್ನು ಇಲ್ಲಿ ಕೊಡಲಾಗುತ್ತದೆ. ಆದರೆ, ಸಿಲಿಂಡರ್ ಸ್ಫೋಟದಿಂದ ಗಾಯಗೊಂಡ 9 ಜನ ಅಯ್ಯಪ್ಪ ಸ್ವಾಮಿ ಮಾಲಧಾರಿಗಳಿಗೆ ಕಿಮ್ಸ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡಿಲ್ಲ ಎನ್ನುವ ಗಂಭೀರ ಆರೋಪದ ಬೆನ್ನಲ್ಲೇ ಕಿಮ್ಸ್ ವೈದ್ಯಕೀಯ ವ್ಯವಸ್ಥೆ ಹಾಗೂ ವೈದ್ಯರು ಹಾಗೂ ನಿರ್ದೇಶಕರ ಬಗ್ಗೆ ಚರ್ಚೆ ಶುರುವಾಗಿದೆ. ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಕಿಮ್ಸ್‌ಗೆ ಸುತ್ತಮುತ್ತಲಿನ ಹಲವು ಜಿಲ್ಲೆಗಳ ಜನ ಬರುತ್ತಾರೆ.

ಕಿಮ್ಸ್ ಉತ್ತರ ಕರ್ನಾಟಕದ ಆಶಾಕಿರಣವಾಗಿದೆ. ಇಲ್ಲಿಗೆ ಧಾರವಾಡ ಜಿಲ್ಲೆಯಿಂದ ಮಾತ್ರವಲ್ಲದೆ. ಉತ್ತರ ಕನ್ನಡ, ಹಾವೇರಿ, ಗದಗ, ಬಳ್ಳಾರಿ, ವಿಜಯನಗರ ಸೇರಿದಂತೆ ಸುತ್ತಮುತ್ತಲಿಮ ರಾಜ್ಯಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಚಿಕಿತ್ಸೆಗೆ ದಾಖಲಾಗುತ್ತಾರೆ. ಹಲವು ಗಂಭೀರ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿನ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಗಾಯಗೊಂಡಿದ್ದರೆ, ಅದರಲ್ಲಿ 8 ಜನರ ಸ್ಥಿತಿ ಚಿಂತಾ ಜನಕವಾಗಿದೆ ಎಂದು ಹೇಳಲಾಗಿದೆ. ಆದರೆ, ಈ ರೀತಿ ಗಂಭೀರವಾಗಿ ಗಾಯಗೊಂಡವರಿಗೆ ಇಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಮ್ಸ್ ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದ ವೈದ್ಯರನ್ನು ಅಮಾನತು ಮಾಡಿ ಎಂದಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಹ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೋವಿ* ಸಮಯದಲ್ಲಿ ಅತ್ಯುತ್ತಮ ಸೇವೆ ನೀಡಿದ್ದ ಕಿಮ್ಸ್ ತನ್ನ ಪ್ರತಿಷ್ಠೆ ಹಾಗೂ ವರ್ಚಸ್ಸನ್ನು ಹೆಚ್ಚಿಸಿಕೊಂಡಿತ್ತು. ಆದರೆ, ಇದಾದ ಮೇಲೆ ಅದೇ ಮಾದರಿಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಎಡವಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇದೀಗ ಕಿಮ್ಸ್‌ಗೆ ಮೇಜರ್ ಸರ್ಜರಿ ಮಾಡಲು ಸರ್ಕಾರ ಮುಂದಾಗಿದೆ.
ಕಿಮ್ಸ್‌ಗೆ ಶಾಶ್ವತ ನಿರ್ದೇಶಕರ ನೇಮಕ: ಸಂತೋಷ್ ಲಾಡ್
ಕಿಮ್ಸ್‌ಗೆ ಶಾಶ್ವತ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ವಹಿಸಲಿದೆ ಎಂದು ಅವರು ಹೇಳಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿರುವವರನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು ಸರಿ ಇದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಿರ್ಲಕ್ಷ್ಯ ಆರೋಪ ಮಾಡೋದು ಸರಿ ಇದೆ. ಅದರೊಂದಿಗೆ ಪಾಸಿಟಿವ್ ಸಹ ನೋಡಬೇಕು ಇಲ್ಲಿಗೆ ದಿನಕ್ಕೆ 2500 ರೋಗಿಗಳು ಬರ್ತಾರೆ. ಏಳು ಜಿಲ್ಲೆಗಳಿಂದ ಇಲ್ಲಿಗೆ ರೋಗಿಗಳು ಬರ್ತಾರೆ. ಕಿಮ್ಸ್ ಒಳ್ಳೆ ಕೆಲಸ ಸಹ ಮಾಡುತ್ತಿದೆ. ಅಂದು ಕೊಂಡಷ್ಟು ನೆಗೆಟಿವ್ ಇಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ
ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲ (ಸಿಲಿಂಡರ್ ) ಸ್ಫೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದೇ ಗಾಯಾಳುಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಕೆಎಂಸಿಆರ್‌ಐ ನಿರ್ದೇಶಕರ ನೇಮಕಕ್ಕೆ ಕ್ರಮ: ಕೆಲವು ತಿಂಗಳುಗಳಿಂದ ಕೆಎಂಸಿಆರ್‌ಐ ಸಂಸ್ಥೆಯ ಪ್ರಭಾರ ನಿರ್ದೆಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಾಯಂ ನಿರ್ದೇಶಕರ ನೇಮಕಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.












Click it and Unblock the Notifications