ಮೋದಿ ರೋಡ್ ಶೋಗಾಗಿ ₹52 ಲಕ್ಷ ಖರ್ಚು: ಕುತೂಹಲಕ್ಕೆ ಕಾರಣವಾದ ಬ್ಯಾರಿಕೇಡ್ ವೆಚ್ಚ
ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋಗಾಗಿ ರಾಜ್ಯ ಸರ್ಕಾರವು 52 ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದೆ ಎಂದು ರಾಜ್ಯ ಹಣಕಾಸು ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಹುಬ್ಬಳ್ಳಿ, ಮಾರ್ಚ್ 3: ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಕಾರ್ಯಕ್ರಮಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್ ಶೋ ಕಾರ್ಯಕ್ರಮದ ಬ್ಯಾರಿಕೇಡ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋಗಾಗಿ ರಾಜ್ಯ ಸರ್ಕಾರವು 52 ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದೆ ಎಂದು ರಾಜ್ಯ ಹಣಕಾಸು ಇಲಾಖೆಯಿಂದ ಮಾಹಿತಿ ಲಭ್ಯವಾಗಿದ್ದು, ಧಾರವಾಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಯುವಜನೋತ್ಸವ (ಎನ್‌ವೈಎಫ್) ಉದ್ಘಾಟಿಸಲು ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಎನ್‌ವೈಎಫ್‌ನ ಉದ್ಘಾಟನೆಯ ಸ್ಥಳವಾದ ರೈಲ್ವೆ ಮೈದಾನಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 7 ಕಿಮೀ ರೋಡ್‌ಶೋವನ್ನು ಮೋದಿ ನಡೆಸಿದ್ದರು. ಈ ನಿಟ್ಟಿನಲ್ಲಿ 52 ಲಕ್ಷ ಹಣವನ್ನು ಖರ್ಚು ಮಾಡಲಾಗಿದೆ.
ಇನ್ನು ಈ ರೋಡ್‌ಶೋಅನ್ನು ಆರಂಭದಲ್ಲಿ ಕೆಲವು ಜಂಕ್ಷನ್‌ಗಳಲ್ಲಿ ಸಂಕ್ಷಿಪ್ತ ನಿಲುಗಡೆಯಾಗಿ ಯೋಜಿಸಲಾಗಿತ್ತು. ಅಂತಿಮವಾಗಿ ರಸ್ತೆಯುದ್ದಕ್ಕೂ ನಿಂತಿದ್ದ ಜನರಿಗೆ ಕೈಬೀಸುವ ಮೂಲಕ ಪ್ರಧಾನಿ ಮೋದಿ ರೋಡ್‌ಶೋ ಅನ್ನು ಮಾಡಿದರು. ಏಳು ಕಿಮೀ ಮಾರ್ಗದುದ್ದಕ್ಕೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಸುಮಾರು 2,500 ಪೊಲೀಸರನ್ನು ನಿಯೋಜಿಸಲಾಗಿತ್ತು.

ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ರೋಡ್‌ಶೋವನ್ನು ಆಯೋಜಿಸುವ ಉಸ್ತುವಾರಿ ವಹಿಸಲಾಗಿತ್ತು. ಈ ಕುರಿತು ಮಾತನಾಡಿರುವ ಹುಬ್ಬಳ್ಳಿ-ಧಾರವಾಡ ಜಿಲ್ಲಾಡಳಿತದ ಅಧಿಕಾರಿಯೊಬ್ಬರು, 'ಬ್ಯಾರಿಕೇಡ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಖರ್ಚುಗಳಿಲ್ಲ' ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭೆಗೆ ಕೆಲವೇ ದಿನಗಳು ಬಾಕಿ ಇರುವಾಗಿ ಪ್ರಧಾನಿ ಮೋದಿ ಪದೇಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಗಾವಿಯಲ್ಲಿ ರೋಡ್‌ಶೋ ನಡೆಸಿದ್ದಾರೆ. ಮೊನ್ನೆ ಶಿವಮೊಗ್ಗಕ್ಕೂ ಭೇಟಿ ನೀಡಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಮಾರ್ಚ್ 12 ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ಎಕ್ಸಪ್ರೆಸ್‌ವೇ ಅನ್ನು ಉದ್ಘಾಟಿಸಲಿದ್ದಾರೆ.












Click it and Unblock the Notifications