ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಕೊನೆಗೂ ಸಸ್ಪೆಂಡ್!
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ನೇಹಾ ಹಿರೇಮಠ ಅವರನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಫಯಾಜ್ ಓದಿದ ಕಾಲೇಜ್‌ಗೆ ಭೇಟಿ ನೀಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಕೊಲೆ ಆರೋಪಿ ವಿದ್ಯಾರ್ಥಿ ಫಯಾಜ್ ಅಮಾನತು ಮಾಡಿಸಿ ಅಮಾನತು ಪತ್ರ ಪಡೆದುಕೊಂಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಹೋರಾಟಗಳು ನಡೆದಿರುವಾಗಲೇ ಈ ಬೆಳವಣಿಗೆ ನಡೆದಿದೆ.
ನೇಹಾ ಹಿರೇಮಠ ಅವರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದ ಪ್ರಮೋದ್ ಮುತಾಲಿಕ್ ಅವರು ಇದೀಗ ಮತ್ತೊಂದು ಹೋರಾಟವನ್ನು ಪ್ರಾರಂಭಿಸಿದ್ದಾರೆ. ಇದುವರೆಗೆ ಫಯಾಜ್ ಎನ್ನುವ ವಿದ್ಯಾರ್ಥಿಯನ್ನು ಅಮಾನತು ಮಾಡದ ಪ್ರಿನ್ಸಿಪಾಲ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಹುಬ್ಬಳ್ಳಿಯ ಪಿಸಿ ಜಾಬಿನ್ ಕಾಲೇಜ್‌ನಲ್ಲಿ ಬಿಸಿಎ ಓದುತ್ತಿದ್ದ ಫಯಾಜ್ ಎಂಬ ಆರೋಪಿಯನ್ನು ಇದುವರೆಗೆ ಅಮಾನತು ಮಾಡಿರಲಿಲ್ಲ. ನೇಹಾ ಹಿರೇಮಠ ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಹಂತಕ ಫಯಾಜ್ ನನ್ನ ಇದುವರೆಗೂ ಕಾಲೇಜ್ ನಿಂದ ಅಮಾನತು ಮಾಡದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಕೊಲೆ ಮಾಡಿದವನನ್ನು ನೀವು ಕಾಲೇಜ್‌ನಲ್ಲಿ ಇರಿಸಿಕೊಂಡರೆ ಹೇಗೆ ಎಂದು ಖಾರವಾಗಿಯೇ ಪ್ರಶ್ನೆ ಮಾಡಲಾಗಿದೆ. ಇದಾದ ಮೇಲೆ ಕೂಡಲೇ ಅಮಾನತು ಮಾಡಲಾಗಿದೆ.

ಪ್ರಭಾವಿ ಶಾಸಕರ ಕೈವಾಡ ಆರೋಪ
ಇನ್ನು ನೇಹಾ ಹಿರೇಮಠ ಅವರ ಪ್ರಕರಣದಲ್ಲಿ ಪ್ರಭಾವಿ ಸಚಿವರ ಕೈವಾಡ ಇದೆ ಎಂದು ಸಹ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಆರೋಪ ಮಾಡಿದ್ದಾರೆ. ಆದರೆ ಆ ಶಾಸಕ ಯಾರು ಎನ್ನುವುದನ್ನು ಅವರು ಹೇಳಿಲ್ಲ. ಈ ಹಿಂದೆಯೂ ಮುತಾಲಿಕ್ ಈ ಆರೋಪವನ್ನು ಮಾಡಿದ್ದರು. ಇದೀಗ ಫಯಾಜ್ ಅಮಾನತು ಮಾಡುವಂತೆ ಆಗ್ರಹಿಸಿ ಪಿಸಿ ಜಾಬಿನ್ ಕಾಲೇಜ್ ಬಳಿ ಬಂದ ಮೇಲೆ ಮತ್ತೆ ಇದೇ ವಿಷಯವನ್ನು ಹೇಳಿದ್ದಾರೆ. 2024ರ ಏಪ್ರಿಲ್ 18ರಂದು ನೇಹಾ ಎನ್ನುವ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿತ್ತು.
ಪರೀಕ್ಷೆಗೆ ಅವಕಾಶ ಇಲ್ಲ: ಇನ್ನು ಕಾಲೇಜು ಆಡಳಿತ ಮಂಡಳಿಯು ಕೊಲೆ ಆರೋಪಿ ಫಯಾಜ್ ಎನ್ನುವ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾತನು ಮಾಡಿರಲಿಲ್ಲ. ಈಗ ಹೋರಾಟದ ನಂತರ ಅಮಾನತು ಮಾಡಿದೆ. ಇನ್ನು ಹಂತಕನಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕೊಡದಿರಲು ಕಾಲೇಜ್ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಫಯಾಜ್ ಪಿಸಿ ಜಾಬಿನ್ ಕಾಲೇಜ್‌ನಲ್ಲಿ ಬಿಸಿಎ ವ್ಯಾಸಂಗ ಮಾಡತ್ತಿದ್ದ. ಪಿಸಿ ಜಾಬಿನ್ ಕಾಲೇಜ್‌ನಲ್ಲಿ ಸದ್ಯ ಫಯಾಜ್ ವಿದ್ಯಾಭ್ಯಾಸ ಮಾಡಲು ಆಗಲ್ಲ. ಐದು ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಆಗಿದ್ದ ಎಂದು ಹೇಳಲಾಗಿದೆ.

ಮುಂದೆ ಕಾಲೇಜ್‌ಗೆ ಫಯಾಜ್ ಬರುವುದಕ್ಕೆ ಅವಕಾಶ ಕೊಡುವುದಿಲ್ಲ. ನಾವು ಪರಿಪೂರ್ಣವಾಗಿ ಫಯಾಜ್‌ನ ಅಮಾನತು ಮಾಡಿದ್ದೇವೆ ಎಂದು ಪಿಸಿ ಜಾಬಿನ್ ಕಾಲೇಜ್ ಪ್ರಿನ್ಸಿಪಾಲ್ ಎಲ್.ಡಿ ಹೊರಕೇರಿ ಅವರು ಹೇಳಿದ್ದಾರೆ.












Click it and Unblock the Notifications