ನಮ್ಮದು ಮೋದಿ ಸಂಸ್ಕೃತಿ ಎಂದ ಸಿಎಂ ಬಸವರಾಜ ಬೊಮ್ಮಾಯಿ
ನಮ್ಮದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಸ್ಕೃತಿಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದೇಕೆ ಎನ್ನುವ ವಿವರ ಇಲ್ಲಿದೆ.
ಹುಬ್ಬಳ್ಳಿ, ಫೆಬ್ರವರಿ, 10: ಯಾರು ಯಾವ ಯಾವ ಸಂಸ್ಕೃತಿ ಎಂಬುವುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಸ್ಕೃತಿಯಾಗಿದೆ. ದೇಶವನ್ನು ವಿಶ್ವ ಮಾದರಿಯಲ್ಲಿ ಗೌರವಿಸುವ ಏಕೈಕ ನಾಯಕ ನರೇಂದ್ರ ಮೋದಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಲಕ್ಕುಂಡಿ ಉತ್ಸವಕ್ಕೆ ಹೊರಟಿದ್ದೇವೆ. ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಆಚರಣೆ ಮಾಡಲು ಆಗಿರಲಿಲ್ಲ. ಈಗ ಲಕ್ಕುಂಡಿ ಉತ್ಸವಕ್ಕೆ ಹೊರಟಿದ್ದೇವೆ. ಲಕ್ಕುಂಡಿ ವಿಶ್ವವಿಖ್ಯಾತ ಪ್ರಸಿದ್ಧಿ ಪಡೆದಿರುವ ಪ್ರವಾಸಿತಾಣವಾಗಿದೆ. ಅಲ್ಲದೇ ಅದು ನಮ್ಮ ಪರಂಪರೆಯಾಗಿದೆ ಎಂದರು.
ಮೋದಿಯನ್ನ ಹೊಗಳಿದ ಬೊಮ್ಮಾಯಿ
ಭಾರತವನ್ನು ಶಸಕ್ತವಾಗಿ, ಶ್ರೀಮಂತವಾಗಿ ಕಟ್ಟುವ ಕಾಲ ಬಂದಿದೆ. ಸ್ವಾತಂತ್ರ ನಂತರದ ಕಾಲ ಬಂದಿದೆ. ಜಗತ್ತಿನಲ್ಲಿ ಭಾರತವನ್ನು ಸರ್ವ ಶ್ರೇಷ್ಠ ಮಾಡಿದ್ದು, ಮೋದಿಯವರು. ಆ ಧ್ಯೇಯ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ತೀರ್ಮಾನ ಮಾಡುತ್ತೇವೆ
ಏರ್‌ಪೋರ್ಟ್‌ಗೆ ಯಡಿಯೂರಪ್ಪ ಹೆಸರು ಬೇಡ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಶಿವಮೊಗ್ಗಕ್ಕೆ ಹೋದಾಗ ನನಗೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ನಾನು ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ ಎಲ್ಲ ಏರ್‌ಪೋರ್ಟ್ ವಿಚಾರವಾಗಿ ತೀರ್ಮಾನ ಮಾಡಲಾಗುವುದು. ಏರಪೋರ್ಟ್‌ಗೆ ಹೆಸರಿಡುವ ವಿಚಾರವಾಗಿ ನಾವು ತೀರ್ಮಾನ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಎಚ್.ಡಿ.ಕೆ ವಿರುದ್ಧ ಶೆಟ್ಟರ್ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದಲ್ಲಿ ವೈಯಕ್ತಿಕ ವಿಷಯ, ಜಾತಿಯ ವಿಷಯಗಳನ್ನು ತೆಗೆದುಕೊಂಡು ಮಾತನಾಡುವುದು ಸರಿಯಲ್ಲ. ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿಯವರು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದ ಅವರು, ದೊಡ್ಡ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ವೈಯಕ್ತಿಕ ವಿಚಾರಗಳನ್ನು ಹಾಗೂ ಜಾತಿಗಳನ್ನು ಇಟ್ಟುಕೊಂಡು ಮಾತನಾಡಬಾರದು. ಜಾತಿಯ ಬಗ್ಗೆ ಮಾತನಾಡುವುದು ರಾಜಕೀಯ ನಾಯಕರಿಗೆ ಶೋಭೆ ತರುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕೀಳುಮಟ್ಟದ ಭಾಷೆ ಬಳಕೆ, ಜಾತಿ ಬಳಕೆ ಮಾಡುವುದು ಸರಿಯಲ್ಲ ಎಂದಿದ್ದರು.












Click it and Unblock the Notifications