ಡಿ.ಕೆ.ಶಿವಕುಮಾರ್ ಪರ ಶಾಸಕ ಎನ್.ಎ.ಹ್ಯಾರಿಸ್ ಭರ್ಜರಿ ಬ್ಯಾಟಿಂಗ್
ಹುಬ್ಬಳ್ಳಿ, ಜನವರಿ 16: ರಾಜ್ಯದಲ್ಲಿ ಸಿಎಂ ಕುರ್ಚಿ ವಿಚಾರದ ಜೊತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರ ಬದಲಾವಣೆ ವಿಚಾರ ಮುಂಚೂಣಿಗೆ ಬಂದಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಈ ವೇಳೆ ಹಾಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಪರವಾಗಿ ಕೆಲವು ಧ್ವನಿ ಎತ್ತಿದ್ದಾರೆ. ಅವರ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರು ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಎಂಬ ಸಚಿವ ಸತೀಶ್ ಜಾರಕಿಹೂಳಿ ಹೇಳಿಕೆ ವಿಚಾರ ಈಗ ಮುನ್ನಲೆ ಬರುತ್ತಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಇಟ್ಟುಕೊಳ್ಳಬೇಡಿ ಎಂದು ಅವರು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿದಷ್ಟು ಒಳ್ಳೆಯ ಕೆಲಸ ಯಾರು ಮಾಡಿಲ್ಲ. ಪಕ್ಷದ ಸಂಘಟನೆ ಮಾಡಿದ್ದಾರೆ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವಲ್ಲಿ ಅವರು ಹೆಚ್ಚು ಶ್ರಮಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಚ್ಚು ಒಳ್ಳೆಯ ಕೆಲಸ ಮಾಡಿದ್ದಾರೆ. ಈಗಿನ ಸಮಯದಲ್ಲಿ ಡಿ.ಕೆ ಶಿವಕುಮಾರ್ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಅಭಿಪ್ರಾಯ ಹೊರ ಹಾಕಿದರು.
ಇನ್ನೂ ಕೆಲವು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಮುಂದುವರಿಯಬೇಕು. ಸದ್ಯ ಈಗ ಸತೀಶ್ ಜಾರಕಿಹೂಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಆಗುವುದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಪಕ್ಷ ಯಾವ ರೀತಿ ಹೇಳುತ್ತದೆ ಅದನ್ನು ಎಲ್ಲರೂ ಪಾಲಿಸಬೇಕು ಪಕ್ಷದ ಹಿರಿಯ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಸಿಎಂ-ಡಿಸಿಎಂ ಸಂಬಂಧ ಹೇಗಿದೆ?
ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ಹಾಗೂ ಡಿಸಿಎಂ ಶಿವಕುಮಾರ್ ಮುಖಾಮುಖಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ಸಣ್ಣದಾದ ಮಿಸ್ ಕಮ್ಯೂಕೇಷನ್ ಆಗಿದೆ. ಈ ಉಭಯ ನಾಯಕರು ಹೆಚ್ಚು ಆಪ್ತರಾಗಿದ್ದಾರೆ. ಒಂದೇ ಪ್ಲೈಟ್ ನಲ್ಲಿದಲ್ಲಿಯೇ ಓಡಾಡುತ್ತಾರೆ. ಅವರಿಬ್ಬರ ಸಂಬಂಧ ಉತ್ತಮವಾಗಿದೆ.
ಸ್ವತ ಡಿ.ಕೆ.ಶಿವಕುಮಾರ್ ಹೇಳಿದ್ದು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯಾನವರೇ ಸಿಎಂ ಆಗಿ ಮುಂದುವರಿತ್ತಾರೆ ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಇರುತ್ತಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಸಿಎಲ್ ಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಬಗ್ಗೆ ಮಾತನಾಡಿದ್ದಾರೆ. ಇಬ್ಬರಿಗೂ ಎಷ್ಟು ಕ್ಲೋಸ್ ಎಂಬುದು ನನಗೂ ಗೊತ್ತಿದೆ ಎಂದರು.
ಅಧಿಕಾರ ಹಂಚಿಕೆ ಬಗ್ಗೆ ಹೇಳಿದ್ದೇನು?
ಯಾವುದೇ ಊಹಾಪೋಹಗಳಿಗೆ ಅವಕಾಶ ಕೊಡಬೇಡಿ ಎಂದು ಮೊನ್ನೆಯ ಸಭೆಯಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ತಿಳಿಸಿದ್ದಾರೆ.
ಇದೊಂದು ಪಕ್ಷದ ಶಿಸ್ತಿನ ವಿಚಾರವಾಗಿ ಮಾತನಾಡಿದ ಅವರು, ಯಾರು ಪಕ್ಷದ ವಿರುದ್ಧ ಮಾತನಾಡಬಾರದು. ಪಕ್ಷದ ಆಂತರಿಕ ವಿಚಾರವಾಗಿ ಸಾಕಷ್ಟು ಅನಗತ್ಯವಾದ ಗೊಂದಲ ಬೇಡ ನಮ್ಮ ಸಿದ್ಧಾಂತ, ತೀರ್ಮಾನ ವಿರುದ್ಧ ಯಾರು ಮಾತನಾಡಬಾರದು ಎಂದು ತಿಳಿಸಿದ್ದಾರೆ ಎಂದರು.












Click it and Unblock the Notifications