Karnataka elections 2023: ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಕೆಲಸ ಆಗ್ತಿದೆ: ಸಿಡಿದೆದ್ದ ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಏಪ್ರಿಲ್, 6: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಶಿರಸಿಗೆ ಹೋಗಲು ಕಾಗೇರಿ ಅವರ ಬಳಿ ಸಮಯ ಕೇಳಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದರು.
ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಇಂದೇ ರಾಜಿನಾಮೆ ಕೊಡುತ್ತೇನೆ. ನಂತರ ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತಾನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ. ಈಗಾಗಲೇ ಒಂದು ಹೆಜ್ಜೆಯನ್ನಿ ಮುಂದೆ ಇಟ್ಟಿದ್ದೀನಿ, ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.
ಅಲ್ಲದೇ ಬಿಜೆಪಿಯಲ್ಲಿ ಪರೋಕ್ಷವಾಗಿ ವ್ಯವಸ್ಥಿತವಾಗಿ ವೀರಶೈವ ಲಿಂಗಾಯಕತರನ್ನು ತುಳಿಯುವ ಕೆಲಸ ಆಗುತ್ತಿದೆ. ಈ ಮೂಲಕ ಹಿರಿಯ ನಾಯಕರನ್ನು ಕಟ್ಟಿ ಹಾಕುವ ಕೆಲಸಗಳನ್ನು ಮಾಡಲಾಗುತ್ತಿದೆ. ನಾನು ಕಾನೂನು ವ್ಯಾಪ್ತಿಯೊಳಗೆ ಇದ್ದೇನೆ. ಹೀಗಾಗಿ ನನಗೆ ಯಾವುದೇ ಭಯವಿಲ್ಲ ಎಂದರು.
ಇನ್ನು ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲಾ ಆಯ್ಕೆಗಳು ನನ್ನ ಮುಂದೆ ಇವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಗ್ರೌಂಡ್ ಲೆವಲ್‌ನ ಏನು ನಡೀತಿದೆ ಎಂದು ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಎಂದರು.

ಹಾಗೆಯೇ ಕಾಂಗ್ರೆಸ್ ಮುಖಂಡರು ಯಾರೂ ಸಂಪರ್ಕಿಸಿಲ್ಲ, ಆದರೆ ಪ್ರತಿನಿಧಿಯನ್ನು ಕಳುಹಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯಲ್ಲಿ ಕೆಲವರ ಹಿತಕ್ಕಾಗಿ ಇನ್ನಿತರರನ್ನು ಬಲಿ ಕೊಡುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡದೇ ಇರುವುದು ಬಿಜೆಪಿಗೆ ಮುಳುವಾಗುತ್ತದೆ. ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ. ಟೇಕನ್ ಇಟ್ ಗ್ರ್ಯಾಂಟೆಡ್ ಅನ್ನುವ ಹಾಗೆ ಮಾತಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications