ಹುಬ್ಬಳ್ಳಿ ಗಲಭೆ ಪ್ರಕರಣ ಪ್ರಕರಣ ಕೈಬಿಡಲು ಡಿಸಿಎಂ ಪತ್ರ: ಪೊಲೀಸ್ ಕಮೀಷನರ್ ಹೇಳಿದ್ದೇನು..?
ಹುಬ್ಬಳ್ಳಿ, ಅಕ್ಟೋಬರ್ 03: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಮುಚ್ಚಿ ಹಾಕಲು ಗೃಹ ಇಲಾಖೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
2022ರ ಏಪ್ರಿಲ್‌ನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣವನ್ನು ಕೈಬಿಡುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನಾಯಕರ ನಡೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಡಿಕೆ ಶಿವಕುಮಾರ್ ಅವರ ಪತ್ರ ಈಗ ವಿವಾದ ಸೃಷ್ಟಿಸಿದೆ.
ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಸಹ ಮಾತನಾಡಿದ್ದು 'ಅದು ನಮ್ಮ ಆಡಳಿತಾತ್ಮಕ ಆಂತರಿಕ ವಿಚಾರ' ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಬಗ್ಗೆ ತನ್ವೀರ್ ಸೇಠ್ ಪತ್ರ ಬರೆದಿದ್ದರು. ಇದೀಗ ಹುಬ್ಬಳ್ಳಿ ಗಲಭೆಯನ್ನು ಕೈಬಿಡಲು ಡಿಕೆ ಶಿವಕುಮಾರ್ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡುವಂತೆ ಗೃಹ ಇಲಾಖೆಗೆ ಪತ್ರ ಬರೆದ ಸಚಿವ ಡಿ.ಕೆ ಶಿವಕುಮಾರ್ ಅವರ ಶಿಫಾರಸು ಆಧರಿಸಿ ಪ್ರಕರಣದ ಮಾಹಿತಿಯನ್ನು ಎಡಿಜಿ ಕೇಳಿದ್ದಾರೆ. ಪ್ರಕರಣ ಹಿಂಪಡೆಯುವ ಬಗ್ಗೆ ದಾಖಲೆ ಸಹಿತ ಅಭಿಪ್ರಾಯ ಕೇಳಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರರಿಂದ ಹು-ಧಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
ಹಳೇ ಹುಬ್ಬಳ್ಳಿ ಕೇಸ್‌ನಲ್ಲಿ ಹುಬ್ಬಳ್ಳಿ ಗಲಭೆಕೋರರ ಖುಲಾಸೆಗೆ, ಕೋಮುಗಲಭೆ ಪ್ರಕರಣ ಕೈಬಿಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಶಿಫಾರಸು ಪತ್ರ ಬರೆದಿರುವುದು ಈಗ ಬಹಿರಂಗ ಆಗಿದೆ. ಡಿಸಿಎಂ, ಶಾಸಕರ ಪತ್ರಕ್ಕೆ ಸ್ಪಂದಿಸುವ ನೆಪದಲ್ಲಿ ಕೇಸ್ ಕ್ಲೋಸ್ ಯತ್ನ ನಡೆಸುತ್ತಿದ್ದು, ಆಯುಕ್ತರು, ಎಸ್ಪಿಗಳಿಗೆ ಪತ್ರ ಬರೆದು ಎಡಿಜಿಪಿ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಪ್ರಕರಣದ ಪೂರ್ಣ ವಿವರ ನೀಡುವಂತೆ ಡಿಜಿ-ಐಜಿ ಸೂಚನೆ ನೀಡಲಾಗಿದೆ. ಪ್ರಕರಣದ ಎಫ್ಐಆರ್, ಚಾರ್ಜ್‌ಶೀಟ್, ಸಾಕ್ಷಿಗಳ ಹೇಳಿಕೆ ಸಲ್ಲಿಸಲು ಸೂಚಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಠೀಕರಣಕ್ಕೆ ಇಳಿಯಿತಾ ಎಂಬ ಪ್ರಶ್ನೆ ಮೂಡಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಹಳೇ ಹುಬ್ಬಳ್ಳಿ ಕೇಸ್ ಮಾತ್ರವಲ್ಲದೆ ಶಿವಮೊಗ್ಗ, ಹಾವೇರಿ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲೂ ಇರುವ ಕೇಸ್‌ಗಳನ್ನು ಕೈಬಿಡಲು ಸಿದ್ಧತೆ ಮಾಡುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಹಾಗಾದರೆ ಹುಬ್ಬಳ್ಳಿ ಧಾರವಾಡ ಪೊಲೀಸರು ಯಾವ ವರದಿ ಕೊಡುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications