ಹುಬ್ಬಳ್ಳಿ: ತುಂಬಾ ವರ್ಷಗಳಿಂದ ಒಂದೇ ಠಾಣೆಯಲ್ಲೇ ಠಿಕಾಣಿ ಹೂಡಿದ್ದ ಕೆಲ ಪೊಲೀಸರಿಗೆ ಎದುರಾಯ್ತು ಕಂಟಕ
ಹುಬ್ಬಳ್ಳಿ, ಜೂನ್, 08: ತುಂಬಾ ವರ್ಷಗಳಿಂದ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸ್ ಸಿಬ್ಬಂದಿಗೆ ಈಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವರ್ಗಾವಣೆ ಭಾಗ್ಯ ಕೊಟ್ಟಿದೆ. ವಿಪರ್ಯಾಸವೆಂದರೆ ಪೊಲೀಸ್ ಕಮೀಷನರ್ ವರ್ಗಾವಣೆ ಮಾಡಲು ಆಯಾ ಠಾಣೆಗೆ ಪತ್ರ ಬರೆದರು ಕೂಡ ಇನ್ನೂ ಮಾಹಿತಿ ಬಂದಿಲ್ಲ. ಇದರಿಂದ ಕೆಲ ಪೊಲೀಸರಲ್ಲಿ ಆತಂಕ ಉಂಟಾಗಿದೆ.
ಹೌದು.. ಹಲವು ವರ್ಷಗಳಿಂದ ಒಂದೇ ಪೊಲೀಸ್ ಠಾಣೆಯಲ್ಲಿ ಮಹಾನಗರದಲ್ಲಿಯೇ ಮೊಕ್ಕಾಂ ಹೂಡಿರುವ ಸಿಬ್ಬಂದಿ ಮಾಹಿತಿ ಕೇಳಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಎಸಿಪಿಗಳಿಗೆ ಮತ್ತು ಇನನ್ಸ್‌ಪೆಕ್ಟರ್‌ಗಳಿಗೆ ಮೇ 31 ರಂದು ಪತ್ರ ಬರೆದಿದ್ದಾರೆ. ಅಲ್ಲದೆ ಸಿಬ್ಬಂದಿಯ ಸೇವಾ ಅವಧಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ್ದರು. ಅಲ್ಲದೇ ಜೂನ್ 3ರ ಒಳಗಾಗಿ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದರು.

ಆದರೆ ಈವರೆಗೂ ಅಂತಿಮ ಪಟ್ಟಿ ಆಯುಕ್ತರ ಕಚೇರಿ ಸೇರದಿರುವುದೇ ಅಚ್ಚರಿಯನ್ನು ಮಾಡಿದೆ. ಇನ್ನು ಅವಳಿ ನಗರದಲ್ಲಿನ 19 ಪೊಲೀಸ್ ಠಾಣೆಗಳು, 4 ಸಂಚಾರಿ ಠಾಣೆಗಳಲ್ಲಿ ಸಾಕಷ್ಟು ಸಿಬ್ಬಂದಿ 5 ವರ್ಷಗಳಿಗಿಂತಲೂ ಹೆಚ್ಚು ಕಾಲ ಠಿಕಾಣಿ ಹೂಡಿದ್ದಾರೆ. ಅಲ್ಲಿಂದಲೇ ವೃತ್ತಿ ಬದುಕು ಆರಂಭಿಸಿರುವ ಅವರು, ಅಲ್ಲಿಯೇ ಹವಾಲ್ದಾರ್, ಎಎಸ್‌ಐ, ಎಸ್‌ಐ ಆಗಿ ಪದೋನ್ನತಿ ಹೊಂದಿದ್ದಾರೆ. ಒಂದೊಂದು ಪೊಲೀಸ್ ಠಾಣೆಯಲ್ಲಿ 5 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ 8 ರಿಂದ 10 ಸಿಬ್ಬಂದಿಗಳಿದ್ದಾರೆ ಎನ್ನಲಾಗಿದೆ.
ಒಂದೇ ಠಾಣೆಯಲ್ಲಿ ಬಹಳ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಳೀಯವಾಗಿ ಹಿಡಿತ ಸಾಧಿಸಿರುವುದರಿಂದ, ಇದು ಕಾನೂನು ಬಾಹಿರ ಚಟುವಟಿಕೆ ಆಗಿದೆ. ಮಾಮೂಲಿ, ಹಫ್ತಾ ವಸೂಲಿಯಂತಹ ಆರೋಪಗಳು ಒಂದಲ್ಲ ಒಂದು ಮೂಲಗಳಿಂದ ಪೊಲೀಸ್ ಆಯುಕ್ತರ ಗಮನಕ್ಕೆ ಹೋಗಿವೆ. ಸಿಬ್ಬಂದಿಗಳ ವರ್ತನೆಗೆ ಬೇಸತ್ತು ಹೋಗಿರುವ ಆಯುಕ್ತರು ಸಾಮೂಹಿಕ ವರ್ಗಾವಣೆ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ ಹತ್ತಾರು ವರ್ಷಗಳಿಂದ ಪ್ರಭಾವ ಬಳಸಿಕೊಂಡು ಜಿಲ್ಲೆಯಿಂದಲೇ ಹೊರ ಹೋಗದ ಪೊಲೀಸರನ್ನು ಹೊರ ಜಿಲ್ಲೆಗೆ ವರ್ಗಾಯಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
ವಕೀಲರ ಮೇಲೆ ಪೊಲೀಸರ ಹಲ್ಲೆ ಆರೋಪ
ಇನ್ನು ಇತ್ತೀಚೆಗಷ್ಟೇ ಗುಂಡ್ಲುಪೇಟೆ ಪಟ್ಟಣದ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಕಲಾಪಗಳನ್ನು ಬಹಿಷ್ಕರಿಸಿದ ಘಟನೆ ನಡೆದಿತ್ತು. ಪಟ್ಟಣದ ನ್ಯಾಯಾಲಯಗಳ ಆವರಣದಲ್ಲಿ ಸಮಾವೇಶಗೊಂಡ ವಕೀಲ ಸಂಘದ ಪದಾಧಿಕಾರಿಗಳು ತಮ್ಮ ಸಹೋದ್ಯೋಗಿ ವಕೀಲರಾದ ರಂಜಿತ್ ಅವರ ಮೇಲೆ ಪೊಲೀಸರು ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದರು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ವೆಂಕಟೇಶ್ ಮಾತನಾಡಿ 'ವಕೀಲ ರಂಜಿತ್ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಅಮಾನತು ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದರು.
ವಕೀಲರ ಸಂಘದ ಪದಾಧಿಕಾರಿಗಳಾದ ಹೆಚ್.ವಿ. ರವಿಕಾಂತ್ , ಬಿ. ಶಿವಣ್ಣ, ಎಸ್.ಎನ್. ನಂದೀಶ್ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಅನಿಲ್ ಕುಮಾರ್, ಕಿರಣ್, ಪುಟ್ಟಸ್ವಾಮಿ, ಜವರಾಜು, ಟಿಪ್ಪು ಸುಲ್ತಾನ್ , ರಾಜೇಶ್, ಶಾಂತಮಲ್ಲಪ್ಪ , ಮನು ಶ್ಯಾನುಭೋಗ್ ಸೇರಿದಂತೆ ವಕೀಲರ ಸಂಘದ ಸದಸ್ಯರು ಹಾಜರಿದ್ದರು.
ಕೌಟುಂಬಿಕ ಸಮಸ್ಯೆ ಸಂಬಂಧ ವಕೀಲ ರಂಜಿತ್ ಅವರ ಮಾವ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಠಾಣೆಗೆ ಕರೆದೊಯ್ದ ಪೊಲೀಸರು ವಕೀಲ ರಂಜಿತ್ ಅವರ ಮೇಲೆ ಕಳೆದ ಬುಧವಾರ ರಾತ್ರಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ರಂಜಿತ್ ಅವರು ವಕೀಲರ ಸಂಘಕ್ಕೆ ದೂರು ನೀಡಿದ್ದರು. ಇಂದು ನ್ಯಾಯಲಯದ ವಕೀಲರ ಸಂಘದ ಆವರಣದಲ್ಲಿ ವಕೀಲರು ಸಭೆ ನಡೆಸಿ ನಡಾವಳಿ ಅಂಗೀಕರಿಸಿ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ಕಲಾಪದಿಂದ ಹೊರಗುಳಿದಿದ್ದರು.












Click it and Unblock the Notifications