ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ: ನೂತನ ಮೇಯರ್ & ಉಪ ಮೇಯರ್ ಆಯ್ಕೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ (ಮೇಯರ್) ಜ್ಯೋತಿ ಪಾಟೀಲ ಹಾಗೂ ಉಪಮಹಾಪೌರರಾಗಿ (ಉಪಮೇಯರ್) ಸಂತೋಷ ಚವ್ಹಾಣ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಆಗಿ ಇಲ್ಲಿನ 19ನೇ ವಾರ್ಡ್ ಸದಸ್ಯರಾದ ಜ್ಯೋತಿ ಪಾಟೀಲ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಆಯ್ಕೆಯಾದರು. ಪಾಲಿಕೆಯ 49ನೇ ವಾರ್ಡ್ ಸದಸ್ಯೆಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿಯಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಮಾಹಿತಿ ನೀಡಿದ್ದಾರೆ.
ಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ 59ನೇ ವಾರ್ಡ್ ಸದಸ್ಯರಾದ ಸುವರ್ಣ ಕಲಕುಂಟ್ಲ ಹಾಗೂ 76 ನೇ ವಾರ್ಡ ಸದಸ್ಯರಾದ ವಹೀದಾ ಖಾನಂ ಅಲ್ಲಾಭಕ್ಷ ಕಿತ್ತೂರು ಅವರು ಸ್ಪರ್ಧಿಸಿದ್ದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಉಪ ಮಹಾಪೌರರಾಗಿ ಪಾಲಿಕೆಯ 49ನೇ ವಾರ್ಡ್ ಸದಸ್ಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿದ್ದಾರೆ ಎಂದು ಅವರು ತಿಳಿಸಿದರು.

ಉಪಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ 14ನೇ ವಾರ್ಡ್ ಸದಸ್ಯರಾದ ಶಂಭುಗೌಡ ರುದ್ರಗೌಡ ಸಾಲಮನಿ ಅವರು ಸ್ಪರ್ಧೆ ಮಾಡಿದ್ದರು. ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 87 ಜನರು ಪಾಲ್ಗೊಂಡಿದ್ದರು. ಮೂರು ಜನ ಸದಸ್ಯರು ಗೈರು ಹಾಜರಾಗಿದ್ದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು ನಾಚಿಸುವಂತೆ ಚುನಾವಣೆ: ಇನ್ನು ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಗ್ರೇಟರ್ ಬೆಂಗಳೂರು)ಗೆ ಬರೋಬ್ಬರಿ 5 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಐದು ವರ್ಷಕ್ಕೂ ಹೆಚ್ಚು ಅವಧಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲ. ಇದೀಗ ಗ್ರೇಟರ್ ಬೆಂಗಳೂರು ಪರಿಕಲ್ಪನೆ ಅಡಿ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆಯಾದರೂ, ಈ ನಿಟ್ಟಿನಲ್ಲಿ ಇನ್ನಷ್ಟೇ ಸಿದ್ಧತೆಗಳು ಪ್ರಾರಂಭವಾಗಬೇಕಿದೆ.
ಕಳೆದ ಐದು ವರ್ಷಗಳಿಂದಲೂ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಆಡಳಿತಾಧಿಕಾರಿಗಳೇ ಬಿಬಿಎಂಪಿಯ ಅಧಿಕಾರದ ಚುಕ್ಕಾಣೆಯನ್ನು ಹಿಡಿದಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆಯ ಸದಸ್ಯರು ಇಲ್ಲದೆ ಬೆಂಗಳೂರಿನ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಸಿಗುತ್ತಿಲ್ಲ. ಬೆಂಗಳೂರಿಗರು ಇದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications