ಹುಬ್ಬಳ್ಳಿ-ಧಾರವಾಡ ಜನತೆಗೆ ಗುಡ್‌ನ್ಯೂಸ್: ಅವಳಿ ನಗರಕ್ಕೆ 100 ಹೊಸ ಸಿಟಿ ಬಸ್
ಹುಬ್ಬಳ್ಳಿ, ಫೆ.20: ಹುಬ್ಬಳ್ಳಿ-ಧಾರವಾಡದಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಅಂದಾಜು 45 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ 100 ಹೊಸ ಸಿಟಿ ಬಸ್‌ಗಳನ್ನು ಪಡೆಯಲು ಮುಂದಾಗಿದೆ. ಹೊಸ ವಿನ್ಯಾಸದೊಂದಿಗೆ ಹುಬ್ಬಳ್ಳಿ-ಧಾರವಾಡಕ್ಕೆ ಹೊಸ ಬಸ್‌ಗಳು ಬರಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ವರದಿಗಳ ಪ್ರಕಾರ ಹುಬ್ಬಳ್ಳಿ-ಧಾರವಾಡಕ್ಕೆ ಬರಲಿರುವ ನೂರು ಹೊಸ ಸಿಟಿ ಬಸ್‌ಗಳನ್ನು ಆತ್ಯಾಧುನಿಕವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಈ ಹೊಸ ಬಸ್‌ಗಳು ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ಗಳೊಂದಿಗೆ ಮುಂಭಾಗದ ಕ್ಯಾಮೆರಾ, ಹಿಂಬದಿಯ ಕ್ಯಾಮೆರಾ ಮತ್ತು ಒಳಗಿನ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.

ಇನ್ನು ಹೊಸ ಬಸ್‌ಗಳು ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಹ ಹೊಂದಿರುತ್ತದೆ. ಈ ಆತ್ಯಾಧುನಿಕ ವೈಶಿಷ್ಟ್ಯಗಳು ಬಸ್ ಅಪಘಾತಗಳ ಸಂದರ್ಭದಲ್ಲಿ ಕಾರಣಗಳನ್ನು ಪತ್ತೆಹಚ್ಚಲು ಮತ್ತು ಬಸ್‌ವೊಳಗೆ ನಡೆಯುವ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.
ಪ್ರಸ್ತುತ ಹುಬ್ಬಳ್ಳಿ-ಧಾರವಾಡದ 100 ಬಿಆರ್‌ಟಿಎಸ್ ಬಸ್‌ಗಳು ಸೇರಿದಂತೆ 384 ಮಾರ್ಗಗಳಲ್ಲಿ ಎನ್‌ಡಬ್ಲ್ಯುಕೆಆರ್‌ಟಿಸಿ 413 ಸಿಟಿ ಬಸ್‌ಗಳು ಸಂಚರಿಸುತ್ತಿದೆ.
ಮಾದನಭಾವಿ ಸರ್ಕಾರಿ ಗೋಶಾಲೆಗೆ ಜಿಲ್ಲಾಧಿಕಾರಿ ಭೇಟಿ
ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಸ್ಥಾಪಿಸಿರುವ ಸರ್ಕಾರಿ ಗೋಶಾಲೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಗತ್ಯ ಕುಡಿಯುವ ನೀರು, ಜನ ಜಾನುವಾರುಗಳಿಗೆ ಮೇವು ಮತ್ತು ಜನರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಲು ಜಿಲ್ಲಾಡಳಿತ ಅಗತ್ಯವಾದ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.
20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,33,461 ದೊಡ್ಡ ಮತ್ತು 1,53,938 ಸಣ್ಣ ಪ್ರಾಣಿಗಳು ಸೇರಿ ಒಟ್ಟು 3,87,399 ಪ್ರಾಣಿಗಳಿವೆ. ಸಣ್ಣ ಮತ್ತು ದೊಡ್ಡ ಪ್ರಾಣಿಗಳಿಗೆ ಅನುಗುಣವಾಗಿ ಅಂದಾಜು ಪ್ರತಿದಿನ ಆರು ಕೆಜಿಯಂತೆ ಪ್ರತಿ ವಾರಕ್ಕೆ ಸರಾಸರಿ 10.261 ಟನ್ ಮೇವು ಬೇಕಾಗುತ್ತದೆ. ಕೆಲವು ರೈತರು ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಸ್ವಂತ ಮೇವು ಸಂಗ್ರಹ ಹೊಂದಿದ್ದಾರೆ. ಆದರೂ ಜಿಲ್ಲಾಡಳಿತದಿಂದ ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 1,38,492 ಮೇವು ದಾಸ್ತಾನು: ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಮುಂದಿನ 12 ರಿಂದ 13 ವಾರಕ್ಕೆ ಬೇಕಾಗುವಷ್ಟು ಸುಮಾರು 1,38,492 ಟನ್ ಮೇವು ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತದೆ. ಶೀಘ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಶೇರೆವಾಡ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಫೆಬ್ರವರಿ ತಿಂಗಳ ಅಂತ್ಯದೊಳಗೆ ರೈತರ ಬೇಡಿಕೆಗೆ ಅನುಗುಣವಾಗಿ ಪ್ರತಿ ತಾಲೂಕಿಗೆ ಒಂದು ಮೇವು ಬ್ಯಾಂಕ್ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಮಾದನಭಾವಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಸರಕಾರಿ ಗೋಶಾಲೆ ಆರಂಭಿಸಲಾಗಿದೆ. ಈ ಗೋಶಾಲೆಯಲ್ಲಿ ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆಕಳು, ಕರು ಮತ್ತು 17ಕ್ಕೂ ಹೆಚ್ಚು ಎಮ್ಮೆ ಹಾಗೂ ಕರುಗಳಿವೆ. ರೈತರು ತಮಗೆ ಪಶುಪಾಲನೆಗೆ ತೊಂದರೆ, ಅನಾನುಕೂಲವಿದ್ದಲ್ಲಿ ತಮ್ಮ ಹಸುಗಳನ್ನು ಈ ಗೋಶಾಲೆಗೆ ನೀಡಹುದು. ಸುಮಾರು 1 ಸಾವಿರ ದನಗಳಿರುವ ಖಾಸಗಿಯಾಗಿ 10 ಗೋಶಾಲೆಗಳು ಜಿಲ್ಲೆಯಲ್ಲಿವೆ. ಇವುಗಳಿಗೆ ಪುಣ್ಯಕೋಟಿ ಹಾಗೂ ಪಿಂಜಾರಪೋಳ ಯೋಜನೆಗಳಡಿ ಸರಕಾರದ ಸಹಾಯಧನ ಹಾಗೂ ದಾನಿಗಳ ನೇರವು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.












Click it and Unblock the Notifications