ವಾಣಿಜ್ಯ ನಗರಿ ಜನತೆಗೆ ಸಿಹಿ ಸುದ್ದಿ: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಶೀಘ್ರವೇ ಆರಂಭ
ಹುಬ್ಬಳ್ಳಿ, ಸೆಪ್ಟೆಂಬರ್ 10: ಗೌರಿ ಗಣೇಶ ಹಬ್ಬದ ಬೆನ್ನಲ್ಲೇ ಉತ್ತರ ಕರ್ನಾಟಕದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ಹುಬ್ಬಳ್ಳಿಯಿಂದ ಪುಣೆಗೆ ರೈಲು ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ಬಹು ನಿರೀಕ್ಷಿತ ಹುಬ್ಬಳ್ಳಿ-ಪುಣೆ ಮಧ್ಯದ ವಂದೇ ಭಾರತ್ ರೈಲು ಸೇವೆಗೆ ಸೆಪ್ಟೆಂಬರ್ 15 ರಂದು ಹಸಿರು ನಿಶಾನೆ ಸಿಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 15 ರಂದು ದೇಶದ ವಿವಿಧ ನಿಲ್ದಾಣಗಳ ಮಧ್ಯೆ ಸಂಚರಿಸುವ ಹೊಸ ವಂದೆ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅಂದೇ ವಂದೆ ಭಾರತ್ ರೈಲು ಪುಣೆಯಿಂದ ಸಂಚಾರ ಪ್ರಾರಂಭಿಸಲಿದೆ. ಈಗಾಗಲೇ ಹುಬ್ಬಳ್ಳಿ ಮಾರ್ಗವಾಗಿ ಧಾರವಾಡ- ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಇದು ಈ ಭಾಗದಲ್ಲಿ ಸಂಚರಿಸುವ ಎರಡನೇ ವಂದೇ ಭಾರತ್ ರೈಲು ಇದಾಗಿದೆ.

ಮೂಲಗಳ ಪ್ರಕಾರ ಈ ವಂದೇ ಭಾರತ್ ರೈಲು ಸೆಪ್ಟೆಂಬರ್ 15ರ ಉದ್ಘಾಟನಾ ಸಂಚಾರದ ನಂತರ ಸೋಮವಾರ ಹೊರತುಪಡಿಸಿ ವಾರದ ಇನ್ನುಳಿದ ಆರು ದಿನಗಳಲ್ಲಿ ಹುಬ್ಬಳ್ಳಿ-ಪುಣೆ ಮಧ್ಯೆ ಸಂಚರಿಸಲಿದೆ. ಆದರೆ, ಪ್ರತಿ ನಿತ್ಯ ಯಾವ ದಿನಾಂಕದಿಂದ ಸಂಚಾರ ಪ್ರಾರಂಭಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿ ನಿಗದಿಯಾಗಿಲ್ಲ.
ಈಗಾಗಲೇ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ ಪ್ರಸ್ತಾವನೆ ಪ್ರಕಾರ ಈ ವಂದೇ ಭಾರತ್ ರೈಲು ಬೆಳಗಿನ ಜಾವ 5 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಧ್ಯಾಹ್ನ 2.10ಕ್ಕೆ ಪುಣೆ ತಲುಪಲಿದೆ. ಮರಳಿ 2.40ಕ್ಕೆ ಪುಣೆಯಿಂದ ಹೊರಟು, ರಾತ್ರಿ 11.50ಕ್ಕೆ ಮರಳಿ ಎಸ್ ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ.












Click it and Unblock the Notifications