ವಾಣಿಜ್ಯ ನಗರಿಯಲ್ಲಿ ಸಾಮರಸ್ಯದ ಗಣೇಶೋತ್ಸವ: 25 ಸಾವಿರದ ವಿಗ್ರಹ ನೀಡಿದ ಮುಸ್ಲಿಂ ದಂಪತಿ
ಹುಬ್ಬಳ್ಳಿ, ಸೆಪ್ಟೆಂಬರ್ 09: ಹುಬ್ಬಳ್ಳಿ ನಗರ ಎಂದ ಕೂಡಲೇ ತಕ್ಷಣ ಎಲ್ಲರ ನೆನಪಿಗೆ ಬರುವುದು ಕೋಮು ಸಂಘರ್ಷ. ಆದರೆ ಪ್ರತಿ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ಧರ್ಮದ ಜನರ ನಡುವಿನ ಭಾವೈಕ್ಯತೆಯನ್ನು ನಾವು ಕಾಣಬಹುದು. ಕೋಮು ಸಂಘರ್ಷದಿಂದ ಕುಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾಮರಸ್ಯಕ್ಕೆ ಮಾದರಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಸದ್ಯ ಹುಬ್ಬಳ್ಳಿಯಲ್ಲಿ ಹಿಂದಿನ ಕಹಿ ಘಟನೆಗಳನ್ನು ಮರೆತು ಹಿಂದೂ- ಮುಸ್ಲಿಂ ಸಮುದಾಯಗಳು ಶಾಂತಿಯುತ ಜೀವನ, ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ಗಣೇಶ ಹಬ್ಬ ಮತ್ತೊಂದು ಹೆಜ್ಜೆಯಾಗಿದೆ. ಕೆಲವು ವರ್ಷಗಳ ಹಿಂದೆ ಗಣೇಶ ಹಬ್ಬದ ಸಮಯದಲ್ಲಿ ಬಡಿದಾಡಿಕೊಳ್ಳುತ್ತಿದ್ದ ಹುಬ್ಬಳ್ಳಿಯಲ್ಲಿ ಈಗೀಗ ಹಿಂದೂ- ಮುಸ್ಲಿಂ ಬಾಂಧವರು ಜೊತೆಯಾಗಿ ಹಬ್ಬ ಮಾಡುತ್ತಿದ್ದಾರೆ.

ಹುಬ್ಬಳ್ಳಿ ಎಂದ ತಕ್ಷಣವೇ ನಮಗೆ ನೆನಪಾಗೋದು ವಾಣಿಜ್ಯದ ಹೆಡ್ ಕ್ವಾಟರ್ಸ್. ಇದರ ಬಳಿಕ ತಲೆಗೆ ಬರುವುದೇ ರಕ್ತ ಚರಿತೆ ಹೊಂದಿರುವ, ಕೋಮು ಗಲಭೆಯ ಕುರುಹುಗಳು. ಸಣ್ಣ ಪುಟ್ಟ ಗಲಾಟೆಯಿಂದ ಹಿಡಿದು, ಈದ್ಗಾ ಮೈದಾನ, ಅಯೋಧ್ಯೆಯ ಜನ್ಮಭೂಮಿ ಹೋರಾಟದಂತಹ ಕರಾಳ ನೆನಪಿಗಳಿವೆ. ಇದಕ್ಕೆ ಗಣೇಶ ಹಬ್ಬವು ಹೊರತಾಗಿಲ್ಲ. ಹಬ್ಬ ಬಂದರೆ ಹುಬ್ಬಳ್ಳಿ ಮಂದಿಗೆ ಎಷ್ಟು ಖುಷಿನೋ, ಅಷ್ಟೇ ಆತಂಕದ ಛಾಯೆ ಆವರಿಸುತ್ತದೆ. ಇಂತಹ ಹುಬ್ಬಳ್ಳಿಯಲ್ಲಿ ಇದೇ ಗಣೇಶ ಹಬ್ಬ ಈಗ ಸಹೋದರ ಸಾಮರಸ್ಯವನ್ನು ಸಾರಿ ಹೇಳುತ್ತಿದೆ.
ಹಿಂದೂಗಳ ಜೊತೆಗೆ ಮುಸ್ಲಿಂ ಸಮುದಾಯ ಸಹ ಖುಷಿ ಖುಷಿಯಾಗಿ ಗಣೇಶನ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 51 ವಾರ್ಡ್ನ ಪ್ರಿಯದರ್ಶಿನಿ ಕಾಲೋನಿಯ ಚಹ್ವಾಣ್ ಪ್ಲಾಟ್ ನಿವಾಸಿಗಳು ಇಂತಹ ಸಾಮರಸ್ಯದ ಘಟನೆಗೆ ಸಾಕ್ಷಿಯಾಗಿದ್ದಾರೆ. ಇಲ್ಲಿನ ಮಾರುತಿ ಹಿತವರ್ತಕ ಸೇವಾ ಸಂಘ ಕಳೆದ 15 ವರ್ಷಗಳಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದೆ. ಆದರೆ ಈ ಬಾರಿ ಇಲ್ಲಿ ಹಿಂದೂ-ಮುಸ್ಲಿಂ ಒಂದೇ ಎಂದು ಸಾರುವ ವಿನಾಯಕ ಪ್ರತಿಷ್ಠಾಪನೆಗೊಂಡಿದ್ದಾನೆ.

ಇಸ್ಲಾಂ ಧರ್ಮದ ಸಾಬುಬುದ್ದಿನ್ ಮತ್ತು ಸಲ್ಮಾ ದಂಪತಿ ಈ ಬಾರಿ 25 ಸಾವಿರದ ಬೃಹತ್ ಗಣೇಶ ಮೂರ್ತಿಯನ್ನು ಮಂಡಳಿಗೆ ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ನದಾಫ್, ಕಲ್ಲೂರ ಎಂಬ ಮಾಜಿ ಪೊಲೀಸ್ ಅಧಿಕಾರಿಗಳು ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಮೂರ್ತಿ ಪ್ರತಿಷ್ಠಾಪನೆ ಕಾರ್ಯವನ್ನು ಅವರೇ ಮುಂದೆ ನಿಂತು ಮಾಡಿದ್ದಾರೆ.
ಹಬ್ಬದ ನೆಪದಲ್ಲಿ ಒಂದು ಧರ್ಮವನ್ನು ಮತ್ತೊಂದು ಧರ್ಮದವರು ಕೀಳಾಗಿ ನೋಡುವ, ತೊಂದರೆ ನೀಡುವ ಅದೆಷ್ಟೋ ಜನರಿಗೆ ಇದು ಮಾದರಿಯಾಗಿದೆ. ಇಷ್ಟು ಮಾತ್ರವಲ್ಲದೇ ಇದೇ ಮೊದಲ ಬಾರಿಗೆ ಯಾವುದೇ ಮುಸ್ಲಿಂ ಸಂಘಟನೆಗಳ ವಿರೋಧ ಇಲ್ಲದೇ ಯಾವುದೇ ವಿವಾದಾತ್ಮಕ ಘಟನೆಗಳಿಲ್ಲದೆ ಬಹಳಷ್ಟು ಸುಲಭವಾಗಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಅಲ್ಲದೇ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ನಡೆಸಿದ ಶಾಂತಿ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಂಘಟನೆಗಳು, ಮುಖಂಡರು ಮುಕ್ತವಾಗಿ ಭಾಗವಹಿಸಿ, ತಮ್ಮ ಅಭಿಪ್ರಾಯ ಹಂಚಿಕೊಂಡಿವೆ.












Click it and Unblock the Notifications