Hubballi airport: ಹುಬ್ಬಳ್ಳಿ ಜನರಿಗೆ ಸಿಹಿಸುದ್ದಿ ನೀಡಲಿದೆ ಫ್ಲೈ 91
ಹುಬ್ಬಳ್ಳಿ, ಮಾರ್ಚ್ 31: ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣ ಹುಬ್ಬಳ್ಳಿಯಾಗಿದೆ. ಇಲ್ಲಿಗೆ ಹೆಚ್ಚಿನ ವಿಮಾನ ಸೇವೆ ಬೇಕು ಎಂಬ ಬೇಡಿಕೆ ಇದೆ. ಸದ್ಯ ವಿಮಾನ ನಿಲ್ದಾಣಕ್ಕೆ 7 ವಿಮಾನಗಳು ಮಾತ್ರ ಬಂದು ಹೋಗುತ್ತವೆ. ಇದರಲ್ಲಿ ಮೂರು ವಿಮಾನಗಳು ಬೆಂಗಳೂರು ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ. ಈಗ ಮತ್ತೊಂದು ವಿಮಾನಯಾನ ಸಂಸ್ಥೆ ವಿಮಾನ ನಿಲ್ದಾಣ ಪರಿಶೀಲನೆ ನಡೆಸಿದ್ದು, ಶೀಘ್ರವೇ ಸಿಹಿಸುದ್ದಿ ನೀಡುವ ನಿರೀಕ್ಷೆ ಇದೆ.
ಈ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ. ಫ್ಲೈ 91 ವಿಮಾನಯಾನ ಸಂಸ್ಥೆಯ ವಿಮಾನ ಸುರಕ್ಷತಾ ವಿಭಾಗದ ತಂಡ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭಿಸುವ ಕುರಿತು ಮಾಹಿತಿಗಳನ್ನು ಸಂಗ್ರಹ ಮಾಡಿದೆ ಎಂದು ಹೇಳಿದೆ. ಅಂಕಿಅಂಶದ ಮಾಹಿತಿಯನ್ನು ಅವರಿಗೆ ನೀಡಲಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.

ಫ್ಲೈ 91 ವಿಮಾನಯಾನ ಸಂಸ್ಥೆಯ ಅಧಿಕಾರಿಗಳ ತಂಡ ಹೊಸ ವಿಮಾನ ಹಾರಾಟದ ಸಿಹಿಸುದ್ದಿಯೊಂದಿಗೆ ವಾಪಸ್ ಬರುತ್ತೇವೆ ಎಂದು ಭರವಸೆಯನ್ನು ಕೊಟ್ಟಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಮೂಲಕ ಹುಬ್ಬಳ್ಳಿಯಿಂದ ಮತ್ತೊಂದು ವಿಮಾನ ಸೇವೆ ಆರಂಭವಾಗುವ ಸೂಚನೆ ಸಿಕ್ಕಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿಯಂತ್ರಿಸುವ ಮತ್ತು ನಿರ್ವಹಣೆ ಮಾಡುವ ರಾಜ್ಯದ 4 ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವಾಗಿದೆ. ಉಳಿದಂತೆ ಬೆಳಗಾವಿ, ಕಲಬುರಗಿ ಮತ್ತು ಮೈಸೂರು ನಿಲ್ದಾಣಗಳು ಪಟ್ಟಿಯಲ್ಲಿವೆ.
ದೇಶಿಯ ವಿಮಾನಗಳ ಸೇವೆ: ಭಾರತದ 2 ಮತ್ತು 3ನೇ ದರ್ಜೆಯ ನಗರಗಳಿಗೆ ವಿಮಾನ ಸೇವೆ ನೀಡುವ ದೇಶಿಯ ವಿಮಾನಯಾನ ಕ್ಷೇತ್ರದಲ್ಲಿ ಫ್ಲೈ 91 ವಿಮಾನಯಾನ ಸಂಸ್ಥೆಯು ಸಕ್ರಿಯವಾಗಿದೆ. ವಿಮಾನಯಾನ ಕ್ಷೇತ್ರದ ಉದ್ಯಮದ ತಜ್ಞರಿಂದ ಸ್ಥಾಪಿಸಲ್ಪಟ್ಟ ಮತ್ತು ವೃತ್ತಿಪರ ಹಣಕಾಸು ಬೆಂಬಲ ಹೊಂದಿರುವ ಸಂಸ್ಥೆ ಪ್ರತಿಯೊಬ್ಬ ಭಾರತೀಯ ಸಹ ವಿಮಾನ ಪ್ರಯಾಣವನ್ನು ಮಾಡಬೇಕು ಎಂಬ ಗುರಿಯನ್ನು ಹೊಂದಿದೆ.
ದೇಶದ ಪ್ರಾದೇಶಿಕ ನಗರಗಳ ಮೇಲೆ ಗಮನ ಹರಿಸಿ ಎಟಿಆರ್ 72 ಮಾದರಿಯ ಕಡಿಮೆ ಸೀಟಿನ ವಿಮಾನಗಳನ್ನು ಫ್ಲೈ 91 ಹಾರಾಟ ನಡೆಸುತ್ತಿದೆ. ದೇಶದ ಪ್ರಾದೇಶಿಕ ವಿಮಾನ ನಿಲ್ದಾಣಗಳಿಂದ ಪರಿಣಾಮಕಾರಿ ಕಾರ್ಯಾಚರಣೆಗೆ ಫ್ಲೈ 91 ಉತ್ತಮ ಆಯ್ಕೆಯಾಗಿದ್ದು, ದರ ಸಹ ಕಡಿಮೆ ಇದೆ. ವಿಶ್ವಾಸಾರ್ಹ, ಆರಾಮದಾಯಕ ಮತ್ತು ಕಡಿಮೆ ವೆಚ್ಚದ ವಿಮಾನ ಸೇವೆಯನ್ನು ನೀಡಲು ಫ್ಲೈ 91 ಬದ್ಧವಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ 7 ವಿಮಾನಗಳು ಸಂಚಾರವನ್ನು ನಡೆಸುತ್ತದೆ. ಈ ಮೂಲಕ ಉತ್ತರ ಕರ್ನಾಟಕವನ್ನು ದೇಶದ ವಿವಿಧ ರಾಜ್ಯಗಳಿಗೆ ಸಂಪರ್ಕಿಸುತ್ತದೆ. 7ರ ಪೈಕಿ 3 ವಿಮಾನಗಳು ಬೆಂಗಳೂರು-ಹುಬ್ಬಳ್ಳಿಯನ್ನು ಸಂಪರ್ಕಿಸುತ್ತದೆ. ಉಳಿದಂತೆ ಹೈದರಾಬಾದ್, ದೆಹಲಿ, ಪುಣೆ, ಮುಂಬೈಗೆ ಹುಬ್ಬಳ್ಳಿಯಿಂದ ವಿಮಾನಗಳಿವೆ.
ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಗೊಳಿಸಲು ಒಪ್ಪಿಗೆ ನೀಡಿದೆ. ಇದಕ್ಕಾಗಿ ಹೊಸ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗುತ್ತದೆ. 260 ಕೋಟಿ ರೂ. ವೆಚ್ಚದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಿ, ಹಳೆಯ ಟರ್ಮಿನಲ್‌ನಿಂದ ಕಾರ್ಗೋ ಸೇವೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣದ ನೀಲನಕ್ಷೆ ತಯಾರು ಮಾಡಿ ಟೆಂಡರ್ ಕರೆದಿದೆ. ಎರಡು ವರ್ಷಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೊಸ ಟರ್ಮಿನಲ್ ಕಟ್ಟಡ 20 ಸಾವಿರ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರಲಿದೆ.
ವಿಮಾನ ನಿಲ್ದಾಣ ಪೀಕ್ ಅವರ್‌ನಲ್ಲಿ 2400 ಪ್ರಯಾಣಿಕರನ್ನು ನಿರ್ವಹಣೆ ಮಾಡುವಷ್ಟು ವ್ಯವಸ್ಥೆಯನ್ನು ಹೊಂದಲಿದೆ. ಸದ್ಯ ವಿಮಾನ ನಿಲ್ದಾಣ ಕೇವಲ 300 ಪ್ರಯಾಣಿಕರ ನಿರ್ವಹಣೆಯನ್ನು ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.












Click it and Unblock the Notifications