Breaking: ನ.14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್
ಹುಬ್ಬಳ್ಳಿ, ನವೆಂಬರ್ 08: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಕರೆದಿದ್ದ ವಿಚಾರಣೆಗೆ ಗೈರಾಗಿದ್ದರಿಂದ ನವೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಮತ್ತೆ ಸಮನ್ಸ್ ನೀಡಿದೆ.
ಸಮನ್ಸ್ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿ ಡಿ. ಕೆ. ಶಿವಕುಮಾರ್, ನವೆಂಬರ್ 14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ, ಆದರೆ ಅಂದು ಜವಾಹರ್ ಲಾಲ್ ನೆಹರು ಜಯಂತಿ ಇದೆ. ಹೀಗಿದ್ದರು ಕಾನೂನಿಗೆ ಗೌರವ ಕೊಡಬೇಕು. ಈ ಬಗ್ಗೆ ವಕೀಲರ ಜೊತೆ ಚರ್ಚೆ ನಡೆಸಿ ನಿರ್ಧರಿಸುತ್ತೇನೆ ಎಂದರು.
ಅಲ್ಲದೇ ಸೋಮವಾರ ಸಹೋದರ ಸಂಸದ ಡಿ. ಕೆ. ಸುರೇಶ್ ಇಡಿ ವಿಚಾರಣೆಗೆ ಹಾಜರಾಗಿದ್ದರು. ಆ ಬಗ್ಗೆ ಮಾಹಿತಿ ಪಡೆದು ಏನಾಯಿತು? ಎಂದು ತಿಳಿಸುವೆ ಎಂದರು. ಸೋಮವಾರ ಇಡಿ ವಿಚಾರಣೆಗೆ ಹಾಜರಾಗದೇ ಡಿ. ಕೆ. ಶಿವಕುಮಾರ್ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಆಯೋಜಿಸಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ತೊಡಗಿಕೊಂಡಿದ್ದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅಕ್ರಮದ ಹಣ ವರ್ಗಾವಣೆ ವಿಚಾರವಾಗಿ ತನಿಖೆ ನಡೆಸುತ್ತಿದೆ. ಈ ಸಂಬಂಧ ಡಿ. ಕೆ. ಶಿವಕುಮಾರ್ ಮತ್ತವರ ಸಹೋದರ ಸಂಸದ ಡಿ. ಕೆ. ಸುರೇಶ್ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು. ಆದರೆ ಅಂದು ಪಕ್ಷದ ಕಾರ್ಯಕರ್ತರೊಬ್ಬರ ಹುಟ್ಟು ಹಬ್ಬ ಪ್ರಯುಕ್ತ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದಿಲ್ಲ ಎಂದು ಸ್ವತಃ ಡಿ. ಕೆ. ಶಿವಕುಮಾರ್ ತಿಳಿಸಿದ್ದರು.
ಹೀಗಾಗಿ ಅವರು ಇಡಿ ವಿಚಾರಣೆಗೆ ಗೈರಾದ ಮರುದಿನ ಅಂದರೆ ಮಂಗಳವಾರ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿ ನವೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಪದೇ ಪದೇ ಕರೆದು ತೊಂದರೆ ಕೊಡುತ್ತಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇನೆ. ವಿಚಾರಣೆಗೆ ಹಾಜರಾಗುವ ಬಗ್ಗೆ ಯೋಚಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಬೇಸರ ವ್ಯಕ್ತಪಡಿಸಿದರು.












Click it and Unblock the Notifications