ಹುಬ್ಬಳ್ಳಿ ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಮದ್ಯಪಾನ: ಬುದ್ಧಿ ಹೇಳಿದ ಅಧಿಕಾರಿ ಮೇಲೆ ಹಲ್ಲೆ
ಹುಬ್ಬಳ್ಳಿ, ಸೆಪ್ಟೆಂಬರ್ 21: ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ಮದ್ಯಪಾನ ಮಾಡದಂತೆ ಬುದ್ದಿವಾದ ಹೇಳಿದಕ್ಕೆ ಸರ್ಕಾರಿ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅದರಗುಂಚಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಲಾಗಿದೆ.
ಅದರಗುಂಚಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಎಂದಿನಂತೆ ತಮ್ಮ ಚಾವಡಿಯಲ್ಲಿ ಭೂ ದಾಖಲೆಗಳಿಗೆ ಆಧಾರ ಕಾರ್ಡ್ ಸೀಡಿಂಗ್ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚಾವಡಿ ಮುಂಭಾಗದಲ್ಲಿಯೇ ಇಬ್ಬರು ಯುವಕರು ಮದ್ಯಪಾನ ಮಾಡುತ್ತಿದ್ದರು. ಇದನ್ನು ಕಂಡ ಅಧಿಕಾರಿ ಗ್ರಾಮ ಆಡಳಿತ ಅಧಿಕಾರಿ ಕಚೇರಿ ಮುಂಭಾಗದಲ್ಲಿ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆ ನಡೆಸುವುದು ಅಪರಾಧ. ಹೀಗೆ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ.

ಇಷ್ಟಕ್ಕೆ ಕೋಪಗೊಂಡ ಅದರಗುಂಚಿ ಗ್ರಾಮದ ಮಹಮ್ಮದ್ ಸಾಬ್ ನದಾಫ್ ಹಾಗೂ ಅವರ ಸಹೋದರ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿ, ಬೈಕಿನ ಚಾವಿಯನ್ನು ತೆಗೆದುಕೊಂಡು ತಲೆ ಹಾಗೂ ಕಣ್ಣಿನ ಕೆಳಭಾಗಕ್ಕೆ ಗಾಯವಾಗುವಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಹೋದರರ ಹಲ್ಲೆಯಿಂದ ಗಾಯಗೊಂಡಿದ್ದ ಗ್ರಾಮ ಆಡಳಿತ ಅಧಿಕಾರಿಯನ್ನು ಸ್ಥಳೀಯರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಅಧಿಕಾರಿಯ ಆರೋಗ್ಯ ವಿಚಾರಿಸಿದ್ದಾರೆ.
ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ಮರಗಳ ತೆರವಿಗೆ ಬಹಿರಂಗ ಹರಾಜು
ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ 97 ಮರಗಳು ಮತ್ತು 58 ಟೊಂಗೆಗಳನ್ನು ತೆರುವುಗೊಳಿಸಲು ಹರಾಜು ಕರೆಯಲಾಗಿದೆ. ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಸೆಪ್ಟೆಂಬರ್ 30, 2024 ಮತ್ತು ಅಕ್ಟೋಬರ್ 8, 2024 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.
ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 (3) (ಗಿII) ರ ಸೆಕ್ಷನ್‍ಗಳಲ್ಲಿ ಅಗತ್ಯ ಪಡಿಸಿರುವಂತೆ ಈ ಬಗ್ಗೆ ತಕರಾರು ಸಲ್ಲಿಸ ಬಯಸುವವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಉಪ ವಿಭಾಗ, ಧಾರವಾಡ ಹಾಗೂ ಧಾರವಾಡದ ಕೆ.ಸಿ.ಪಾರ್ಕ ಎದುರು ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಲಿಖಿತ ರೂಪದಲ್ಲಿ ಸೆಪ್ಟೆಂಬರ್ 29, 2024 ರ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications