ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿ ಪಕ್ಷಕ್ಕೆ ಲಾಭವಿದೆ-ಮಾಜಿ ಸಚಿವ ಎ.ರಾಮದಾಸ್
ಹುಬ್ಬಳ್ಳಿ, ಜನವರಿ 10: ಮುಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಆಗಲಿದ್ದು, ಅವರು ಆಗದಿದ್ದರೇ ದೇಶ ಛಿದ್ರ ಛಿದ್ರ ಆಗಲಿದೆ ಎಂದು ಮಾಜಿ ಸಚಿವ ಎ.ರಾಮದಾಸ್ ಹೇಳಿದರು.
ಹುಬ್ಬಳ್ಳಿ ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಚಿನ್ನಾದಂತಹ ದೇಶಗಳು ಭಾರತಕ್ಕೆ ನುಸುಳುವ ಯತ್ನ ನಡೆಸುತ್ತಿದ್ದಾರೆ. ಈ ವೇಳೆ ದೇಶವನ್ನು ಸುರಕ್ಷಿತವಾಗಿರಲು ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮುಂದುವರೆಯಬೇಕು. ದೇಶ ಎಂದರೆ ಮೋದಿ, ಮೋದಿ ಎಂದರೆ ದೇಶ ಎಂದರು.

ಮತ್ತೆ ರಾಜಕೀಯ ಬದಲಾವಣೆ ವಿಚಾರವಾಗಿ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಜೆಡಿಎಸ್‌ನೊಂದಿಗೆ ಮೈತ್ರಿಯಿಂದಾಗಿ ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ. ಆ ಭಾಗದಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕರ್ನಾಟಕದಿಂದ ಸಲ್ಲಿಸಿರುವ ಅರ್ಜಿ ರಾಷ್ಟ್ರದಲ್ಲಿಯೇ ಅತ್ಯಾಧುನಿಕ ಆಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಶೀಘ್ರದಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಯೋಜನೆಯನ್ನು ಜಾರಿಗೊಳಿಸಲಾಗುವುದು. ಪಿಎಂ ಸ್ವನಿಧಿ ಯೋಜನೆಯನ್ನು ಹು-ಧಾ ಮಹಾನಗರ ಪಾಲಿಕೆ ಅತ್ಯುತ್ತಮವಾಗಿ ಜಾರಿಗೊಳಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ನೀಡಲು ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಹೊಂದಾಣಿಕೆಯಿಂದ ಕೆಲವು ಪ್ರದೇಶಗಳಲ್ಲಿ ಲಾಭ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನಲ್ಲಿ ಮೂರ್ನಾಲ್ಕು ಜನ ಪ್ರಯತ್ನ ನಡೆಸುತ್ತಿದ್ದಾರೆ. ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವುದನ್ನು ಇನ್ನು ಅಧಿಕೃತವಾಗಿ ತಿಳಿಸಿಲ್ಲ. ಮೈಸೂರು ಪ್ರದೇಶದಲ್ಲಿ ಯಾರೇ ನಿಂತರೂ ಬಿಜೆಪಿನೇ ಗೆಲ್ಲುತ್ತದೆ ಎಂದರು.

ಮನುಷ್ಯನ ಜೀವನದಂತೆ ಈಗಿನ ರಾಜಕೀಯ ಬದಲಾಗಿದ್ದು. ನಾನು ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಆದರೆ ಬೇರೆಯವರಿಗೆ ಅವಕಾಶ ಕೊಡಿ ಅಂದಾಗ ನಾನು ಬಿಟ್ಟು ಕೊಟ್ಟೆ. ವೈಯಕ್ತಿಕವಾಗಿ ನಾನು ಸರಿ ಇರಬೇಕು, ಅದನ್ನು ನಾನು ಮಾಡುತ್ತಿದ್ದೇನೆ. ಆದರೆ ಎಲ್ಲೋ ಒಂದು ಕಡೆ ಹಿರಿಯರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮುಖಂಡರಾದ ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ರವಿ ನಾಯಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications