ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ ವೇಳೆ ಭಾರೀ ಅವಘಡ: ಕಬ್ಬಿಣ ತಲೆ ಮೇಲೆ ಬಿದ್ದು ASI ಸ್ಥಿತಿ ಚಿಂತಾಜನಕ
ಹುಬ್ಬಳ್ಳಿ, ಸೆಪ್ಟೆಂಬರ್ 11: ಹುಬ್ಬಳ್ಳಿಯ ಫ್ಲೈಓವರ್ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದೆ. ಫ್ಲೈಓವರ್ ಮೇಲಿನಿಂದ ಕಬ್ಬಿಣದ ಸಲಕೆ ಬಿದ್ದು ಎಎಸ್‌ಐ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹಳೇ ಕೋರ್ಟ್ ಸರ್ಕಲ್ ಬಳಿ ನಡೆದಿದೆ. ಈ ಫ್ಲೈಓವರ್ ಕಾಮಗಾರಿ ಆರಂಭಕ್ಕೂ ಮುನ್ನವೇ ಜನರಿಗೆ ಪ್ರಾಣಾಂತಕವಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ, ಜನಸಂಚಾರ ಅತೀ ಹೆಚ್ಚಾಗಿರುವ ಹೊತ್ತಿನಲ್ಲಿ ಫ್ಲೈಓವರ್ ಕಾಮಗಾರಿ ನಡೆಸಿದ ಪರಿಣಾಮ ಈ ಘಟನೆ ಸಂಭವಿಸಿದೆ.
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎಎಸ್ಐ ನಾಭಿರಾಜ್ ದಯಣ್ಣವರ ಗಾಯಗೊಂಡವರು ಎಂದು ಗುರುತಿಸಲಾಗಿದೆ. ನಾಭಿರಾಜ್ ನಿನ್ನೆ ಸಂಜೆ ನಾಲ್ಕು ಗಂಟೆ ಹೊತ್ತಿಗೆ ತಮ್ಮ ಕರ್ತವ್ಯ ನಿಯೋಜಿತ ಸ್ಥಳಕ್ಕೆ ತೆರಳುತ್ತಿದ್ದರು. ಈ ವೇಳೆ ಕೋರ್ಟ್ ವೃತ್ತದ ಬಳಿ ಬರುತ್ತಿದ್ದಂತೆ ಏಕಾಏಕಿ ಕಬ್ಬಿಣದ ಸಲಕೆಯೊಂದು ಮೇಲಿನಿಂದ ಅವರ ತಲೆಯ ಮೇಲೆ ಬಿದ್ದಿದೆ. ನಾಭಿರಾಜ್ ದಯಣ್ಣವರ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ನಾಭಿರಾಜ್ ಅವರನ್ನು ಸ್ಥಳೀಯರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಭಿರಾಜ್ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಎಎಸ್ಐ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದರು. ಎಎಸ್ಐ ನಾಭಿರಾಜ್ ದಯಣ್ಣವರ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಸಚಿವರು ಹಾಗೂ ಅಧಿಕಾರಿಗಳು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಾಮಗಾರಿಯನ್ನು ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.












Click it and Unblock the Notifications