ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ ಅವಘಡದಲ್ಲಿ ASI ಸಾವು: 11 ಜನರ ಬಂಧನ
ಹುಬ್ಬಳ್ಳಿ, ಸೆಪ್ಟೆಂಬರ್ 16: ಹುಬ್ಬಳ್ಳಿ ಹಳೇ ಕೋರ್ಟ್ ಬಳಿಯಲ್ಲಿ ತೆರಳುತ್ತಿದ್ದಾಗ ಫ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ನಾಭಿರಾಜ್ ದಾಯಣ್ಣವರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಳೆದ ಸೆಪ್ಟೆಂಬರ್ 10ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಭದ್ರತಾ ಕರ್ತವ್ಯಕ್ಕೆ ಹಾಜರಾಗಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಅಂದು ಸಂಜೆ ನಾಲ್ಕು ಗಂಟೆ ಹೊತ್ತಿಗೆ ನಾಭಿರಾಜ್ ದಾಯಣ್ಣವರ ತಮ್ಮ ಕರ್ತವ್ಯ ನಿಯೋಜಿತ ಸ್ಥಳಕ್ಕೆ ತೆರಳುತ್ತಿದ್ದರು. ಈ ವೇಳೆ ಕೋರ್ಟ್ ವೃತ್ತದ ಬಳಿ ಬರುತ್ತಿದ್ದಂತೆ ಏಕಾಏಕಿ ಕಬ್ಬಿಣದ ಸಲಕೆಯೊಂದು ಮೇಲಿನಿಂದ ಅವರ ತಲೆಯ ಮೇಲೆ ಬಿದ್ದಿದೆ. ನಾಭಿರಾಜ್ ದಯಣ್ಣವರ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ನಾಭಿರಾಜ್ ಅವರನ್ನು ಸ್ಥಳೀಯರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಭಿರಾಜ್ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ಎಎಸ್ಐ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಎಎಸ್ಐ ನಾಭಿರಾಜ್ ನಿನ್ನೆ( ಸೆಪ್ಟೆಂಬರ್ 15) ರಂದು ಕೊನೆಯುಸಿರೆಳೆದಿದ್ದಾರೆ.
ಫ್ಲೈಓವರ್ ಕಾಮಗಾರಿ ವೇಳೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಝಾಂಡು ಕನ್ಸ್ಟ್ರಕ್ಷನ್ ಕಂಪನಿಯ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆ ಕಂಪನಿಯ ನೌಕರರಾದ ಹರ್ಷಾ ಹೊಸಗಾಣಿಗೇರ, ಜಿತೇಂದ್ರಪಾಲ ಶರ್ಮಾ, ಭೂಪೇಂದರ್ ಪಾಲ್, ಮೊಹಮ್ಮದ ಇಮಾದರೂ ಮಿಯಾ, ಅಸ್ಲಂ ಅಲಿ ಜಲೀಲಮಿಯಾ, ಮೊಹಮ್ಮದ ಮಸೂದರ ರೆಹಮಾನ್ ಹಾಜಿ, ಸಬೀಬ ಶೇಖ ಮನ್ಸೂರಾಲಿ, ರಿಜಾವುಲ್ ಹಕ್ ಮಂಜೂರಾಲಿ, ಶಮೀಮ ಶೇಖ ತಂದೆ ಪಿಂಟು ಶೇಖ್, ಮೊಹಮ್ಮದ ಆರೀಫ, ಮೊಹಮ್ಮದ ರಬಿವುಲ್ ಹಕ್ ಬಂಧಿತ ಆರೋಪಿಗಳು.
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಾಮಗಾರಿಯನ್ನು ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಮೃತ ಎಎಸ್ಐ ನಾಭಿರಾಜ್ ದಾಯಣ್ಣವರ ಅವರ ಕುಟುಂಬಕ್ಕೆ ಹುಬ್ಬಳ್ಳಿ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಂತ್ವನ ಹೇಳಿದ್ದಾರೆ.












Click it and Unblock the Notifications