ಎಲ್ಲೆಲ್ಲೂ ಗಂಧದ ಗುಡಿ ಸಂಭ್ರಮ: ಚಿತ್ರಮಂದಿರದಲ್ಲಿ ಚಿಕನ್ ಬಿರಿಯಾನಿ ವಿತರಣೆ
ಹುಬ್ಬಳ್ಳಿ, ಅಕ್ಟೋಬರ್ 28: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಗಂಧದ ಗುಡಿ ಚಿತ್ರ ಸಾಕ್ಷ್ಯಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಎಲ್ಲೆಲ್ಲೂ ಗಂಧದ ಗುಡಿ ಸಂಭ್ರಮ ಮನೆ ಮಾಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಮುಗಿಲೆತ್ತರದ ಪುನೀತ್ ರಾಜ್‌ಕುಮಾರ್ ಅವರ ಕಟೌಟ್ ನಿಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಂಧದ ಗುಡಿ ಬಿಡುಗಡೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸಂಭ್ರಮಾಚರಣೆ ಮೂಲಕ ಗಂಧದಗುಡಿ ಚಿತ್ರವನ್ನು ಅಭಿಮಾನಿಗಳು ಬರಮಾಡಿಕೊಂಡರು.

ಅಪ್ಪು ಕಟೌಟ್‌ಗೆ ಹಾಲಿನ ಅಭಿಷೇಕ
ಹುಬ್ಬಳ್ಳಿ ನಗರದ ಅಪ್ಸರಾ ಚಿತ್ರ ಮಂದಿರದ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಸಂಭ್ರಮ ಜೋರಾಗಿದೆ. ಅಭಿಮಾನಿಗಳು ಅಪ್ಪು ಕಟೌಟ್‌ಗೆ ಹೂವಿನ ಮಾಲೆ ಹಾಕಿ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ ವಿವಿಧ ವಾದ್ಯಗಳ ಮೂಲಕ ಗಂಧದ ಗುಡಿ ಚಿತ್ರವನ್ನು ಅಭಿಮಾನಿಗಳು ಬರಮಾಡಿಕೊಂಡರು. ಅಭಿಮಾನಿಗಳು ಚಿತ್ರಮಂದಿರದಲ್ಲಿ ಅಪ್ಪು ಅಭಿನಯದ ಚಿತ್ರದ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು. ಅಪ್ಪು ಅಭಿಮಾನಿಯೊಬ್ಬ ಸಂಪೂರ್ಣ ಅಪ್ಪುಮಯವಾಗಿದ್ದರು. ಅಪ್ಪು ಅವರ ವಿಭಿನ್ನ ಶೈಲಿಯ ಅಂಗಿಯನ್ನು ಅಭಿಮಾನಿ ಧರಿಸಿದ್ದು ಆಕರ್ಷಣೀಯವಾಗಿತ್ತು.

ಕುಣಿದು ಕುಪ್ಪಳಿಸಿದ ಅಪ್ಪು ಅಭಿಮಾನಿಗಳು
'ವಿದ್ಯಾ ಕಾಶಿ' ಧಾರವಾಡದಲ್ಲೂ ಗಂಧದಗುಡಿಯ ಕಂಪು ಜೋರಾಗಿದೆ. ನಗರದಾದ್ಯಂತ ಗಂಧದ ಗುಡಿ ಕಂಪು ಅದ್ದೂರಿಯಾಗಿ ಸೂಸುತ್ತಿದೆ. ಧಾರವಾಡದಲ್ಲಿ ಪುನೀತ್ ಅಭಿನಯದ ಗಂಧಂದಗುಡಿ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ನಗರದ ಪದ್ಮಾ ಚಿತ್ರಮಂದಿರದ ಬಳಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಪಟಾಕಿ ಸಿಡಿಸಿ ಅಪ್ಪು ಹಾಡುಗಳಿಗೆ ಹೆಜ್ಜೆ ಹಾಕಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಪುನೀತ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಕುಂಬಳಕಾಯಿ ಒಡೆದು ಸಂಭ್ರಮಾಚರಣೆ ಮಾಡಿದರು. ಗಂಧದ ಗುಡಿ ಮೊದಲನೆ ಶೋಗೆ ಅಪ್ಪು ಅಭಿಮಾನಿಗಳ ಬಳಗ ಸಾಗರದಂತೆ ಹರಿದು ಬಂದಿದೆ.

ಚಿತ್ರಮಂದಿರದಲ್ಲಿ ಚಿಕನ್ ಬಿರಿಯಾನಿ ವಿತರಣೆ
ಚನ್ನಪಟ್ಟಣದಲ್ಲಿ ಗಂಧದ ಗುಡಿ ಹವಾ ಜೋರಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಚನ್ನಪಟ್ಟಣದ ಶ್ರೀಲಕ್ಷ್ಮಿ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಪ್ಪು ಅಭಿಮಾನಿಗಳು ಗಂಧದ ಗುಡಿ ಸಂಭ್ರಮಾಚರಣೆಯಲ್ಲಿದ್ದು, ಲಕ್ಷ್ಮೀ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಗೆ ಬಂದವರಿಗೆ ಚಿಕನ್ ಬಿರಿಯಾನಿ ಹಂಚಿದ್ದಾರೆ. ಜೊತೆಗೆ ರಕ್ತದಾನ ಶಿಬಿರ ಸಹ ಆಯೋಜನೆ ಮಾಡಲಾಗಿತ್ತು. ಗಂಧದ ಗುಡಿ ಮೊದಲ ಶೋ ನೋಡಿ ಅಪ್ಪು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಸಿನಿಮಾ 100 ದಿನ ಪ್ರದರ್ಶನ ಕಾಣಲಿ ಎಂದು ಶುಭಹಾರೈಸಿದರು.

ಪುನೀತ್ ಭಾವಚಿತ್ರ ಹಿಡಿದು ಜೈಕಾರ ಕೂಗಿದ ಅಭಿಮಾನಿಗಳು
ಕಾಫಿನಾಡು ಚಿಕ್ಕಮಗಳೂರಿನಲ್ಲೂ ಗಂಧದ ಗುಡಿ ಸಿನಿಮಾದ ಸಂಭ್ರಮ ಜೋರಾಗಿದೆ. ಚಿಕ್ಕಮಗಳೂರು ನಗರದ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಗಂಧದ ಗುಡಿ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಆರಂಭವಾಗುತ್ತಿದಂತೆ ಪುನೀತ್ ಭಾವಚಿತ್ರ ಹಿಡಿದು ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಲ್ಲದೇ ಪಟಾಕಿ ಸಿಡಿಸಿ ಅಪ್ಪುಗೆ ಜೈಕಾರ ಕೂಗಿ ಗಂಧದ ಗುಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಒಟ್ಟಾರೆ ರಾಜ್ಯದ್ಯಾಂತ ಗಂಧದ ಗುಡಿ ಸಂಭ್ರಮ ಮನೆ ಮಾಡಿದ್ದು, ತೆರೆ ಮೇಲೆ ಅಪ್ಪು ನೋಡಿ ಅನೇಕ ಅಭಿಮಾನಿಗಳು ಭಾವುಕರಾಗಿದ್ದಾರೆ.












Click it and Unblock the Notifications