ಗಂಧದ ಗುಡಿ ಚಿತ್ರ ಬಿಡುಗಡೆಗೂ ಮುನ್ನ ಹುಬ್ಬಳ್ಳಿಯಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮ
ಹುಬ್ಬಳ್ಳಿ, ಸೆಪ್ಟೆಂಬರ್, 23: ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರು ಹುಬ್ಬಳ್ಳಿ ನಗರದಲ್ಲಿ ಅಚ್ಚಳಿಯದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅಪ್ಪು ಅಭಿನಯದ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಈಗಿನಿಂದಲೇ ಸಂಭ್ರಮಾಚರಣೆಯಲ್ಲಿ ಮಿಂದೆದ್ದಾರೆ. ಅಪ್ಪು ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.
ತಮ್ಮ ತಂದೆ ಡಾ.ರಾಜ್‌ಕುಮಾರ್ ಆವರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹುಬ್ಬಳ್ಳಿಗೆ ಬಂದು ಹೋಗುತ್ತಿದ್ದರು. ಆಗಿನಿಂದ ಪುನೀತ್ ರಾಜ್‌ಕುಮಾರ್‌ಗೆ ಹುಬ್ಬಳ್ಳಿ ಎಂದರೆ ಅಚ್ಚುಮೆಚ್ಚಾಗಿತ್ತು. ಚಿತ್ರಗಳ ಪ್ರಚಾರ, ಸಂಭ್ರಮಾಚರಣೆಗೆ ಬಂದ ಸಂದರ್ಭದಲ್ಲಿ ರಾಜ್‌ಕುಮಾರ್ ಅವರು ಹುಬ್ಬಳ್ಳಿಯ ಬಗ್ಗೆ ಹೇಳುತ್ತಿದ್ದುದ್ದನ್ನು ಅವರು ಸದಾ ಸ್ಮರಿಸುತ್ತಿದ್ದರು.
ಅಪ್ಪು ಅಭಿಮಾನಿಗಳ ಸಂಭ್ರಮ
ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿ ವರ್ಷ ಸಮೀಪಿಸುತ್ತಾ ಬಂದಿದೆ. ಆದರೂ ಕೂಡ ಅವರ ಕ್ರೇಜ್ ಮಾತ್ರ ಅಭಿಮಾನಿ ದೇವರುಗಳಲ್ಲಿ ಇನ್ನೂ ಹಾಹೆಯೇ ಉಳಿದಿದೆ. ಅವರ ಆದರ್ಶ ಜೀವನ, ಸಮಾಜಮುಖಿ ಕಾರ್ಯಗಳು ಇನ್ನೂ ಅಚ್ಚಳಿಯದೆ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆ ಉಳಿದಿವೆ. ನಾಡಿನ ಅಭಿಮಾನಿಗಳಲ್ಲಿ ಅವರು ಈಗ ದೇವರಾಗಿ ಉಳಿದುಬಿಟ್ಟಿದ್ದಾರೆ.

ಗಂಧದ ಗುಡಿ ಚಿತ್ರದ ಸಂಭ್ರಮಾಚಣೆ
ಡಾ. ಪುನೀತ್ ರಾಜ್‍ಕುಮಾರ್ ಅವರ ಕನಸಿನ ಚಿತ್ರ ಗಂಧದ ಗುಡಿ ಸಿನಿಮಾಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಆದರೆ ಈಗಾಗಲೇ ವಾಣಿಜ್ಯ ನಗರಿಯಲ್ಲಿ ಕ್ರೇಜ್ ಹೆಚ್ಚಾಗಿದ್ದು, ನಗರದ ಚೆನ್ನಮ್ಮ ವೃತ್ತದಲ್ಲಿ ಇಂದು ಪುನೀತ್ ರಾಜ್‍ಕುಮಾರ್ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲಾಯಿತು. ಈ ಮೂಲಕ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದರು. ಡಾ. ಪುನೀತ್ ರಾಜ್‍ಕುಮಾರ್ ಅವರನ್ನು ಕೊನೆಯದಾಗಿ ಬೆಳ್ಳಿ ತೆರೆಯ ಮೇಲೆ ನೋಡುವ ಅವಕಾಶ ಗಂಧದ ಗುಡಿ ಸಿನಿಮಾದಿಂದ ಈಡೇರಲಿದೆ. ಅಕ್ಟೋಬರ್ 28ರಂದು ವಿಶ್ವಾದ್ಯಂತ ಈ ಚಿತ್ರ ತೆರೆ ಕಾಣಲಿದ್ದು, ಅಭಿಮಾನಿಗಳು ಸಿನಿಮಾವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಪುನೀತ್ ರಾಜ್‍ಕುಮಾರ್ ನಮ್ಮನ್ನ ಅಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದ್ದು, ಅವರ ದರ್ಶನಕ್ಕೆ ಅಭಿಮಾನಿಗಳು ಒಂದು ತಿಂಗಳ ಮುಂಚೆಯೇ ಸಜ್ಜಾಗಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ಜಯವಾಗಲಿ, ಗಂಧದ ಗುಡಿ ಸಿನಿಮಾಗೆ ಜಯವಾಗಲಿ ಎಂದು ಜಯಘೋಷ ಕೂಗಿ ಅಭಿಮಾನ ವ್ಯಕ್ತಪಡಿಸಿದರು.












Click it and Unblock the Notifications