ಬಿಲ್ ಪಾಸ್ ಮಾಡಲು ಲಂಚ: ರಾಷ್ಟ್ರಪತಿಗೆ ದಯಾಮರಣ ಅರ್ಜಿ ಸಲ್ಲಿಸಿದ ಹುಬ್ಬಳ್ಳಿ ಗುತ್ತಿಗೆದಾರ
ಹುಬ್ಬಳ್ಳಿ, ಅಕ್ಟೋಬರ್ 30 : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಬಹಳ ದಿನಗಳಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಆಗಾಗ ಜೋರಾದ ವಾದ ಪ್ರತಿವಾದಗಳು ನಡೆಯುತ್ತಲೆ ಇವೆ. ಬೆಳಗಾವಿಯ ಗುತ್ತಿಗೆದಾರನೊಬ್ಬ ಆತ್ಮಹತ್ಯೆಗೆ ಶರಣಾಗಿ ರಾಜ್ಯಾದ್ಯಂತ ದೊಡ್ಡ ಕೋಲಾಹಲ ಉಂಟು ಮಾಡಿತ್ತು.
ಈಗ ಅಂತಹುದೇ ಘಟನೆ ಹುಬ್ಬಳ್ಳಿಯಲ್ಲಿ ಮರುಕಳಿಸಿದೆ. 40% ಆರೋಪ ಮಾಡಿ ಹುಬ್ಬಳ್ಳಿ ಗುತ್ತಿಗೆಗಾರನೊಬ್ಬ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೊವಿಡ್ ಪರಿಕರಗಳ ಸರಬರಾಜು ಮಾಡಿದ್ದ ಬಸವರಾಜು, ಮೂಡಗೆರಿ ತಾಲೂಕಿಗೆ 27 ಲಕ್ಷ ರೂ. ಕಡೂರು ತಾಲೂಕಿಗೆ 85ಲಕ್ಷ ರೂ. ಮೌಲ್ಯದ ಪರಿಕರ ಪೂರೈಕೆ ಮಾಡಿದ್ದಾರೆ.
ಹುಬ್ಬಳ್ಳಿ: ರಸ್ತೆ ಗುಂಡಿಗಳಲ್ಲಿ ಪಟಾಕಿ ಸಿಡಿಸಿ ಸರ್ಕಾರ ವಿರುದ್ಧ ಪ್ರತಿಭಟನೆ
2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪತ್ರದ ಅನುಸಾರ ಪರಿಕರ ಪೂರೈಕೆ ಮಾಡಲಾಗಿದೆ. ಸರಬರಾಜು ಮಾಡಿ 2 ವರ್ಷ ಗತಿಸಿದರೂ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡಲು ಇಒ (executive officer) ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿರುವುದಲ್ಲದೆ, ಇದರಿಂದ ಬೇಸತ್ತು ಗುತ್ತಿಗೆದಾರ ಬಸವರಾಜ್ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಬೇರೆ ಬೇರೆಯವರ ಹೆಸರಲ್ಲಿ ಬಿಲ್‌ನ ಒಟ್ಟು 40 ಪರ್ಸೆಂಟೇಜ್ ಗಿಂತ ಹೆಚ್ಚಿನ ಹಣಕ್ಕೆ ಕಡೂರು ಇಓ ದೇವರಾಜ್ ನಾಯಕ್ ಬೇಡಿಕೆ ಇಟ್ಟಿದ್ದಾರೆ. ಶಾಸಕರ ಹೆಸರಲ್ಲಿ ಹಣ ಕೇಳುತ್ತಿದ್ದಾರೆ ಎಂದು ಬಸವರಾಜ್ ಆರೋಪಿಸುತ್ತಿದ್ದಾರೆ. ಕಮಿಷನ್ ಹಣ ಪಾವತಿ ಮಾಡದ ಹಿನ್ನೆಲೆ ಬಿಲ್ ಬಾಕಿ ಉಳಿಸಿಕೊಂಡ ಅಧಿಕಾರಿ, ಪ್ರಧಾನ ಮಂತ್ರಿ ಕಾರ್ಯಾಲಯದಿಂದ 4 ಬಾರಿ ಬಿಲ್ ಪಾವತಿಸಲು ಸೂಚನೆ ಬಂದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯಾಲಯದಿಂದಲೂ ಆದೇಶ ಬಂದರೂ ಆಫೀಸರ್ಸ್ ಕೇರ್ ಮಾಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿಲ್ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಆದರೂ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ. ಇತ್ತ ಸಾಲಗಾರರ ಕಾಟ ಹೆಚ್ಚಾಗಿದೆ. ಇದರಿಂದ ಮಾನಸಿಕವಾಗಿ ನೊಂದಿರುವ ಗುತ್ತಿಗೆದಾರ ಬಸವರಾಜ್ ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೆಸರನ್ನು ಇಒ ಬಳಕೆ ಮಾಡಿಕೊಳ್ಳುತ್ತಿದ್ದು, ಇದು ಸರಕಾರದ 40 ಪರ್ಸಂಟೇಜ್ ವ್ಯವಹಾರಕ್ಕೆ ಪುಷ್ಠಿ ನೀಡುವಂತಿದೆ. ರಾಷ್ಟ್ರಪತಿಗಳಿಗೆ ಎಲ್ಲಾ ದಾಖಲೆ ಮತ್ತು ಪರ್ಸಂಟೇಜ್‌ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾರ್ಡ್ ಎಲ್ಲವನ್ನೂ ಬಸವರಾಜ್ ರಜಿಸ್ಟರ್ ಪೋಸ್ಟ್ ಮಾಡಿದ್ದಾರೆ.