ಶಿಗ್ಗಾವಿ ಕ್ಷೇತ್ರಕ್ಕೆ ಬಂಪರ್: ಶಿಶುವಿನಹಾಳ ವಿಶ್ವಮಟ್ಟದ ಪ್ರವಾಸಿ ತಾಣ, ಹುಲಗೂರಿಗೆ ಮಿನಿ ಟೆಕ್ಸ್‌ಟೈಲ್ಸ್ ಪಾರ್ಕ್: ಬೊಮ್ಮಾಯಿ
ಶಿಗ್ಗಾಂವಿ, ಏಪ್ರಿಲ್ 30: ತಾಲೂಕಿನ ಶಿಶುವಿನಹಾಳವು ಸಂತ ಶರೀಫ್‌ರು ಹುಟ್ಟಿದ ಸ್ಥಳ. ಈ ಪ್ರದೇಶವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡಲು ಬರೊಬ್ಬರಿ 50 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಿಶುವಿನಹಾಳ, ಹುಲಗೂರು ಹಾಗೂ ಬಸವನಾಳು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು. ಸಂತ ಶಿಶುನಾಳ ಶರೀಫರ ಸಮಾನತೆ, ಧರ್ಮ ಚೌಕಟ್ಟು ಮೀರಿದ ತತ್ವಜ್ಞಾನ ವಿಶ್ವದೆಲ್ಲೆಡೆ ತಲುಪಿದೆ. ಶಿಶುವಿನ ಹಾಳ ಶರೀಫರನ್ನು ಆರಾಧಿಸಿದವರ ಸಂಕಲ್ಪ ಈಡೇರುತ್ತದೆ ಎಂದರು.

ಶಿಶುವಿನಹಾಳದಲ್ಲಿ ಮಾತ್ರವಲ್ಲದೇ ಹುಲಗೂರು ಗ್ರಾಮ ಮೂರು ತಾಲ್ಲೂಕುಗಳ ಕೇಂದ್ರ. ಶಿಗ್ಗಾಂವಿ ತಾಲೂಕಿನಲ್ಲಿ ಹುಲಗೂರು ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಇದೆ. ಇಲ್ಲಿ ಕಾಂಕ್ರೀಟ್ ರಸ್ತೆ, ಸಮುದಾಯ ಭವನಗಳು, ಹೊಸ ಬಸ್ ನಿಲ್ದಾಣ, ಶಾದಿ ಮಹಲ್, ಆಸ್ಪತ್ರೆ ಶಾಲೆಗಳು ಎಲ್ಲ ವರ್ಗಕ್ಕೂ ಸಮನಾದ ಅಭಿವೃದ್ಧಿ ಮಾಡಿದ್ದೇವೆ. ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಕೊಡುವ ಯೋಜನೆ ಜಾರಿ ಮಾಡಿದ್ದೇವೆ. ಶಿಗ್ಗಾವಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಿದ್ದೇನೆ. ಹುಲಗೂರಿನಲ್ಲಿ ಮಿನಿ ಟೆಕ್ಸ್ ಟೈಲ್ ಮಾಡುತ್ತೇನೆ. ಇದರಿಂದ ಕನಿಷ್ಟ 5 ಸಾವಿರ ಜನರಿಗೆ ಉದ್ಯೋಗ ಕೊಡುವ ಕೆಲಸ ಸಿಗಲಿದೆ ಎಂದು ಭರವಸೆ ನೀಡಿದರು.
ಕ್ಷೇತ್ರದ ಜನರ ಪ್ರೀತಿ ವಿಶ್ವಾಸದಿಂದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೆ. 2018ರಲ್ಲಿ ನಿಮ್ಮ ಆಶೀರ್ವಾದದಲ್ಲಿ ಟ್ರಿಪಲ್ ಪವರ್ ಇತ್ತು. ಶಾಸಕನಾಗಿ, ಸಚಿವನಾಗಿ ಹಾಗೂ ಮುಖ್ಯಮಂತ್ರಿ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಕ್ಷೇತ್ರದ ಹೊರಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕ್ಷೇತ್ರಕ್ಕೆ ಬಂದಾಗ ನಿಮ್ಮ ಬಸವರಾಜ ಅಷ್ಟೇ ಎಂದು ಹೇಳಿದರು.
180ಕಿಮಿಯಿಂದ ತುಂಗೆ ತರಲಿದ್ದೇವೆ
ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ಗಂಗೆ ಬರುತ್ತಿದೆ. ಬಸವನಾಳದಲ್ಲಿ ಕಾಮಗಾರಿ ಮುಗಿಯುತ್ತಾ ಬಂದಿದೆ. 438 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಪ್ರತಿ ಮನೆಗೆ ನೀರು ಕೊಡುವ ಯೋಜನೆ ಇದೆ. 180 ಕಿಲೋಮೀಟರ್ ದೂರದ ತುಂಗಭದ್ರಾ ನದಿಯಿಂದ ನೀರು ತರಲಿದ್ದೇವೆ. ಇದು ಕೇಂದ್ರದ ಸಹಾಯದಿಂದ ಮಾಡಲು ಸಾಧ್ಯವಾಯಿತು. 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ. ನಾವು ನುಡಿದಂತೆ ನಡೆಯುವ ಸರ್ಕಾರ ಎಂದು ತಿಳಿಸಿದರು.

ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ
ಕಾಂಗ್ರೆಸ್ ನವರು ಈಗ ಗ್ಯಾರಂಟಿ ಕೊಡುವುದಾಗಿ ಹೇಳುತ್ತಾರೆ. ಅದು ಯಾವುದೂ ಗ್ಯಾರಂಟಿ ಇಲ್ಲ. ಈಗ 10 ಕೆಜಿ ಉಚಿತ ಅಕ್ಕಿ ಬೇಕೋ ಬೇಡವೋ ಅಂತ ಕೇಳುತ್ತಿದ್ದಾರೆ. ಅವರು ಬರುವ ಮೊದಲೇ 10 ಕೆಜಿ ಅಕ್ಕಿಯನ್ನು ಯಡಿಯೂರಪ್ಪ ಅವರು ಕೊಡುತ್ತಿದ್ದರು. ರಾಹುಲ್ ಗಾಂಧಿ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳುವ ಬದಲು 2000 ಯೂನಿಟ್ ಅಂತ ಹೇಳುತ್ತಾರೆ. ಜನಸಾಮಾನ್ಯರ ಬಳಕೆ ಬಗ್ಗೆ ಅವರಿಗೆ ಅರಿವೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications